Home ಮುಖಪುಟ ಸುದ್ದಿ ಬಿಜೆಪಿ ನಾಯಕರು ಡ್ರಾಮಾ ಮಾಸ್ಟರ್‍ಸ್

ಬಿಜೆಪಿ ನಾಯಕರು ಡ್ರಾಮಾ ಮಾಸ್ಟರ್‍ಸ್

ಬೆಂಗಳೂರು, ಜು. ೧೭- ಅಧಿಕಾರದಲ್ಲಿದ್ದಾಗ ಭೂಸ್ವಾಧೀನ, ವಿರೋಧ ಪಕ್ಷದಲ್ಲಿದ್ದಾಗ ಮೊಸಳೆ ಕಣ್ಣೀರು ಸುರಿಸಿ ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ ನಾಯಕರು ಡ್ರಾಮಾ ಮಾಸ್ಟರ್ಸ್ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.


ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ನಡೆಸಿರುವ ಹೋರಾಟದ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಈ ಹಿಂದೆ ೨೦೦೬ ರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗಲೇ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲೇ ಬಿಡದಿ ಸೇರಿದಂತೆ ೫ ಸಮಗ್ರ ಟೌನ್‌ಶಿಪ್‌ಗಳ ಅಭಿವೃದ್ಧಿಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಬಿಜೆಪಿಯವರು ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.


ಬಿಡದಿ ಟೌನ್‌ಶಿಪ್ ಯೋಜನೆಗೆ ಆರ್. ಅಶೋಕ್ ಅವರು ಸಚಿವರಾಗಿದ್ದ ಕಾಲದಲ್ಲೇ ೨೦೦೬ ರಲ್ಲೇ ಅಧಿಸೂಚನೆ ಹೊರಡಿಸಲಾಗಿದೆ. ೨೦೧೦ ರಲ್ಲಿ ಜಗದೀಶ್‌ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ ಟೌನ್‌ಶಿಪ್ ಅನುಷ್ಠಾನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಿತ್ತು ಎಂದು ಅವರು ನೆನಪಿಸಿದ್ದಾರೆ.


೨೦೨೦ ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ೯ ಸಾವಿರ ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿತ್ತು. ಆಗಲೂ ಆರ್. ಅಶೋಕ್ ಸಚಿವರಾಗಿದ್ದರು. ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ೨೦೨೨ರ ಬಜೆಟ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಘೋಷಿಸಿ ಅನುಷ್ಠಾನಕ್ಕೆ ಮತ್ತೊಂದು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು ಎಂದು ಹೇಳಿರುವ ಸಚಿವ ರಾಮಲಿಂಗಾರೆಡ್ಡಿ ಅವರು, ರೈತರ ಮೇಲೆ ಅಷ್ಟೊಂದು ಕಾಳಜಿ ಇದ್ದರೆ ನೀವು ಅಧಿಕಾರದಲ್ಲಿದ್ದಾಗಲೇ ನೋಟಿಫಿಕೇಷನ್ ರದ್ದು ಮಾಡಬೇಕಿತ್ತಲ್ಲಾ, ಅಂದು ಮಾಡದವರು ಇಂದು ಮೊಸಳೆ ಕಣ್ಣೀರು ಸುರಿಸಿದರೆ ಜನ ನಂಬುತ್ತಾರಾ ಎಂದು ಪ್ರಶ್ನಿಸಿದ್ದಾರೆ.


ಅಂದು ನಿಮ್ಮದೇ ಸರ್ಕಾರ ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಹೆಜ್ಜೆ ಇಟ್ಟಾಗ ಅದು ಅಭಿವೃದ್ಧಿಯ ಮುಖಪುಟ. ಇಂದು ಅದೇ ಯೋಜನೆಯ ಕಾನೂನಾತ್ಮಕ ಪ್ರಕ್ರಿಯೆಗಳು ಮುಂದುವರೆದರೆ ಅದು ರೈತ ವಿರೋಧಿ ಎನ್ನುವ ನಿಮ್ಮ ಈ ಇಬ್ಬಂದಿ ನೀತಿಗೆ ಏನನ್ನಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.