Home ಮುಖಪುಟ ಸುದ್ದಿ ಆಡಳಿತ ಯಂತ್ರಕ್ಕೆ ಸರ್ಜರಿ:ಐಎಎಸ್ ಅಧಿಕಾರಿಗಳ ಎತ್ತಂಗಡಿ

ಆಡಳಿತ ಯಂತ್ರಕ್ಕೆ ಸರ್ಜರಿ:ಐಎಎಸ್ ಅಧಿಕಾರಿಗಳ ಎತ್ತಂಗಡಿ

ಬೆಂಗಳೂರು,ಸೆ.೨೩: ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಇಂದು ಮಹತ್ವದ ಬದಲಾವಣೆ ಮಾಡಿದ್ದು, ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿಯಾಗಿದ್ದ ಡಾ. ಕೆ.ವಿ. ತ್ರಿಲೋಕಚಂದ್ರ ಅವರನ್ನು ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದುವರೆಗೆ ಕೃಷಿ ಇಲಾಖೆ ಕಾರ್ಯದರ್ಶಿಯಾಗಿದ್ದ ಕ್ಯಾಪ್ಟನ್ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಯಾವುದೇ ಹೊಸ ಹುದ್ದೆ ತೋರಿಸಿಲ್ಲ.

ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿದ್ದ ಡಾ. ಕೆ. ರಾಕೇಶ್ ಕುಮಾರ್ ಅವರನ್ನು ಉಪಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ ಸರ್ವೆ, ಸೆಟ್ಲ್‌ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ. ಈ ಹುದ್ದೆಯಲ್ಲಿದ್ದ ಕೆ. ವೆಂಕಟರಾಜಾ ಅವರಿಗೂ ಹೊಸ ಸ್ಥಳ ನಿಯೋಜನೆ ಮಾಡಿಲ್ಲ.

ಪಂಚಾಯತ್ ರಾಜ್ ಇಲಾಖೆ ಆಯುಕ್ತರಾಗಿದ್ದ ಡಾ. ಅರುಂಧತಿ ಚಂದ್ರಶೇಖರ್ ಅವರನ್ನು ಖಜಾನೆ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಎಂಎಸ್‌ಎಂಇ ನಿರ್ದೇಶಕರಾಗಿದ್ದ ವೈ.ಎಸ್. ಪಾಟೀಲ ಅವರನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರಾಗಿ ವರ್ಗಾಯಿಸಲಾಗಿದ್ದು, ಪಂಚಾಯತ್ ರಾಜ್ ಆಯುಕ್ತ ಹಾಗೂ ಕರ್ನಾಟಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕರ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿದೆ.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ.ಎಲ್. ವೈಶಾಲಿ ಅವರನ್ನು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ. ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರಾ ಅವರಿಗೆ ಹಟ್ಟಿ ಚಿನ್ನದ ಗಣಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆನಂದ ಪ್ರಕಾಶ ಮೀನಾ ಅವರನ್ನು ವಿಜಯಪುರ ಜಿಪಂ ಸಿಇಒ ಆಗಿ ವರ್ಗಾಯಿಸಲಾಗಿದೆ. ವಿಜಯಪುರ ಜಿಪಂ ಸಿಇಒ ರಿಷಿ ಆನಂದ್ ಅವರನ್ನು ಶಿವಮೊಗ್ಗ ಜಿಪಂ ಸಿಇಒ ಆಗಿ ನೇಮಿಸಲಾಗಿದೆ.

ಶಿವಮೊಗ್ಗ ಜಿಪಂ ಸಿಇಒ ಎನ್. ಹೇಮಂತ್ ಅವರನ್ನು ಹುಬ್ಬಳ್ಳಿ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಕೊಳ್ಳೇಗಾಲ ಉಪವಿಭಾಗಾಧಿಕಾರಿಯಾಗಿದ್ದ ದಿನೇಶ್ ಕುಮಾರ್ ಮೀನಾ ಅವರನ್ನು ಕೊಡಗು ಜಿಪಂನ ನೂತನ ಸಿಇಒ ಆಗಿ ನೇಮಿಸಲಾಗಿದೆ.