
ನವದೆಹಲಿ, ಸೆ.೨೩: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIಖ) ವಿಚಾರದಲ್ಲಿ ಚುನಾವಣಾ ಆಯೋಗದೊಳಗೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವರದಿಗಳನ್ನು ಚುನಾವಣಾ ಆಯೋಗದ ಮೂಲಗಳು ತಳ್ಳಿಹಾಕಿವೆ. ಎಸ್‌ಐಆರ್ ಸೇರಿದಂತೆ ಆಯೋಗ ಕೈಗೊಂಡಿರುವ ಎಲ್ಲ ನಿರ್ಧಾರಗಳೂ ಮುಖ್ಯ ಚುನಾವಣಾ ಆಯುಕ್ತ (ಅಇಅ) ಜ್ಞಾನೇಶ್ ಕುಮಾರ್ ಹಾಗೂ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಅನುಮೋದನೆಯೊಂದಿಗೆ ಸರ್ವಾನುಮತದಿಂದಲೇ ಕೈಗೊಳ್ಳಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಯಾವುದೇ ವಿಷಯದಲ್ಲಿ ಆಯುಕ್ತರಿಗೆ ವೈಯಕ್ತಿಕ ಅಭಿಪ್ರಾಯಗಳಿರಬಹುದು. ಆದರೆ ಆಯೋಗದ ಅಂತಿಮ ನಿರ್ಧಾರಗಳು ಸರ್ವಾನುಮತದಿಂದಲೇ ಆಗಿವೆ. ಈ ಸ್ಪಷ್ಟನೆ, ಇಬ್ಬರು ಚುನಾವಣಾ ಆಯುಕ್ತರು ಹಲವು ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹಿನ್ನೆಲೆಯಲ್ಲಿ ಬಂದಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ತನಿಖಾ ವರದಿ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ ೧೦ ತಿಂಗಳಲ್ಲಿ ಕನಿಷ್ಠ ೧೪ ಬಾರಿ ಆಯೋಗದ ಕೆಲವು ನಿರ್ಧಾರಗಳು ಹಾಗೂ ಆದೇಶಗಳ ಬಗ್ಗೆ ಲಿಖಿತ ಆಕ್ಷೇಪ ದಾಖಲಿಸಿದ್ದರು. ಕೆಲವು ಸಂದರ್ಭಗಳಲ್ಲಿ ತಮ್ಮ ಗಮನಕ್ಕೆ ಅಥವಾ ಅನುಮೋದನೆಗೆ ಬಾರದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನಿಸಿದ್ದರು ಎಂದು ವರದಿ ತಿಳಿಸಿದೆ.
ಈ ಆಕ್ಷೇಪಗಳು ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರುಗಳ ಅಳಿಸುವಿಕೆ ಹಾಗೂ ಮರುಸ್ಥಾಪನೆ, ಮತದಾರರ ಪಟ್ಟಿಯ ದತ್ತಾಂಶ ನಿರ್ವಹಣೆ, ಮೇಲ್ಮನವಿ ಪ್ರಕ್ರಿಯೆ ಮತ್ತು ಚುನಾವಣಾ ದತ್ತಾಂಶಕ್ಕೆ ಪ್ರವೇಶ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ್ದವು.ಹೊಸ ಮತದಾರರ ನೋಂದಣಿಗೆ ಬಳಸುವ ಫಾರಂ-೬ರಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ಹೊಸ ಘೋಷಣೆಯನ್ನು ಸೇರಿಸಿರುವುದಕ್ಕೂ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ಹೇಳಿದೆ.
ಹೊಸ ಅರ್ಜಿದಾರರ ಹೆಸರು ಅಥವಾ ಅವರ ಪೋಷಕರು/ಅಜ್ಜ-ಅಜ್ಜಿಯರ ಹೆಸರು ಹಿಂದಿನ ಎಸ್‌ಐಆರ್‌ನ ಮತದಾರರ ಪಟ್ಟಿಯಲ್ಲಿ ಇತ್ತೇ ಎಂಬ ಮಾಹಿತಿಯನ್ನು ಕೇಳುವ ಅಂಶವನ್ನು ಫಾರಂನಲ್ಲಿ ಸೇರಿಸಲಾಗಿತ್ತು. ಈ ರೀತಿಯ ಶಾಸನಬದ್ಧ ನಮೂನೆ ಬದಲಾವಣೆಗೆ ನಿಯಮ ತಿದ್ದುಪಡಿ ಅಗತ್ಯವಿದೆ ಎಂದು ಜೋಶಿ ಹಾಗೂ ಸಂಧು ತಮ್ಮ ಟಿಪ್ಪಣಿಗಳಲ್ಲಿ ಹೇಳಿದ್ದರು ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮತದಾರರ ಪಟ್ಟಿಯ ದತ್ತಾಂಶಕ್ಕೆ ರಾಜ್ಯ ಹಾಗೂ ಕ್ಷೇತ್ರಮಟ್ಟದ ಅಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ವ್ಯವಸ್ಥೆ ಕೇಂದ್ರೀಕೃತವಾಗುತ್ತಿದೆ ಎಂಬ ಆತಂಕವನ್ನೂ ಇಬ್ಬರು ಆಯುಕ್ತರು ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.
ಮತದಾರರ ಪಟ್ಟಿಯ ನಿರ್ವಹಣೆಯಲ್ಲಿ ಕ್ಷೇತ್ರದ ಚುನಾವಣಾ ನೋಂದಣಾಧಿಕಾರಿಗಳ ಪಾತ್ರ ಮತ್ತು ಅವರ ದತ್ತಾಂಶ ಪ್ರವೇಶದ ಹಕ್ಕುಗಳ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಕೆಲವು ತಾಂತ್ರಿಕ ಹಾಗೂ ಆಡಳಿತಾತ್ಮಕ ಬದಲಾವಣೆಗಳು ತಮ್ಮ ಗಮನಕ್ಕೆ ತರಲಾಗಿಲ್ಲ ಎಂಬ ಆಕ್ಷೇಪವೂ ದಾಖಲಾಗಿತ್ತು.
ಈ ವರದಿ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಪ್ರಶ್ನೆಗಳನ್ನು ಎತ್ತಿವೆ. ಕಾಂಗ್ರೆಸ್, ಎಸ್‌ಪಿ, ಟಿಎಂಸಿ, ಡಿಎಂಕೆ, ಆಪ್, ಶಿವಸೇನೆ (ಯುಬಿಟಿ) ಹಾಗೂ ಸಿಪಿಐ(ಎಂ) ನಾಯಕರು ಎಸ್‌ಐಆರ್ ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಪಾತ್ರದ ಕುರಿತು ವಿವಿಧ ಆರೋಪಗಳನ್ನು ಮಾಡಿದ್ದಾರೆ.
ಕಾಂಗ್ರೆಸ್ ಆಯೋಗದ ನಿರ್ಧಾರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕುರಿತು ಪ್ರಶ್ನೆ ಎತ್ತಿದ್ದರೆ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಈ ಬೆಳವಣಿಗೆಯನ್ನು ಗಂಭೀರ ಎಂದು ಬಣ್ಣಿಸಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಕೂಡ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ.
ಆದರೆ, ಈ ರಾಜಕೀಯ ಆರೋಪಗಳ ನಡುವೆ ಚುನಾವಣಾ ಆಯೋಗದ ಮೂಲಗಳು ಯಾವುದೇ ನಿರ್ಧಾರದಲ್ಲಿ ಆಯೋಗದ ಸದಸ್ಯರ ಅಧಿಕೃತ ಭಿನ್ನಮತ ಇರಲಿಲ್ಲ; ಎಸ್‌ಐಆರ್ ಸೇರಿದಂತೆ ಎಲ್ಲ ನಿರ್ಧಾರಗಳೂ ಸರ್ವಾನುಮತದಿಂದಲೇ ಕೈಗೊಳ್ಳಲಾಗಿದೆ ಎಂದು ಪುನರುಚ್ಚರಿಸಿವೆ.
























