Home ಜಿಲ್ಲೆ ಕಲಬುರಗಿ ಕರ್ನಾಟಕದಲ್ಲಿ ಪಶ್ಚಿಮ ಬಂಗಾಳದ ಪರಿಸ್ಥಿತಿ ಬರಲು ಬಿಡುವುದಿಲ್ಲ: ಪ್ರಕಾಶ್ ರಾಜ್

ಕರ್ನಾಟಕದಲ್ಲಿ ಪಶ್ಚಿಮ ಬಂಗಾಳದ ಪರಿಸ್ಥಿತಿ ಬರಲು ಬಿಡುವುದಿಲ್ಲ: ಪ್ರಕಾಶ್ ರಾಜ್

ಕಲಬುರಗಿ,ಸೆ.23-ಪಶ್ಚಿಮ ಬಂಗಾಳದಲ್ಲಿ ಎಸ್‍ಐಆರ್‍ಗೆ ಸಂಬಂಧಿಸಿದಂತೆ ಲಕ್ಷಾಂತರ ಪ್ರಕರಣಗಳು ಟ್ರಿಬ್ಯುನಲ್‍ಗೆ ಹೋಗಿವೆ. ಈ ಪ್ರಕರಣಗಳ ವಿಚಾರಣೆ ಪೂರ್ಣಗೊಳ್ಳಲು 15 ವರ್ಷಗಳು ಬೇಕಾಗಬಹುದು. ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಆಗಲು ಬಿಡಬಾರದು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದರು.
ನಗರದ ರಿಂಗ್ ರಸ್ತೆಯ ರಾಮನಗರ ಹಾಗೂ ಮಿಸ್ಬಾ ಕಾಲೋನಿಯಲ್ಲಿ ಎಸ್‍ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸದ ಅಂಗವಾಗಿ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯಲ್ಲಿ ಸಾಮಾನ್ಯ ಜನರು ಸಂಕಷ್ಟ ಎದುರಿಸುತ್ತಿದ್ದು, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಕುರಿತು ಸ್ಪಷ್ಟತೆ ನೀಡದೆ ಜನರನ್ನು ಪರದಾಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಎಸ್‍ಐಆರ್‍ಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 30ರೊಳಗೆ ದಾಖಲೆಗಳನ್ನು ಸಂಗ್ರಹಿಸಿ ರಾಜ್ಯ ಸರಕಾರದ ಮುಂದಿಡಲಾಗುವುದು. ಅಕ್ಟೋಬರ್ 1 ರಂದು ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಗುವುದು. ಅ.15 ರಂದು ದಿಲ್ಲಿಯ ಜಂತರ್ ಮಂತರನಲ್ಲಿ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳ ಸಂತ್ರಸ್ತ ಜನರೂ ಸೇರಲಿದ್ದಾರೆ ಎಂದು ಹೇಳಿದರು.