
೨ ಕೋಟಿ ಮೌಲ್ಯದ ವಾಹನ ಜಪ್ತಿ
ಬೆಂಗಳೂರು,ಸೆ.೨೩- ಕಾರುಗಳ ಆರ್‌ಸಿ ಕಾರ್ಡ್, ಬ್ಯಾಂಕ್ ಎನ್‌ಒಸಿ ಹಾಗೂ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ಸೀಲ್‌ಗಳನ್ನು ನಕಲಿ ಮಾಡಿ ಸಾರ್ವಜನಿಕರಿಗೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿ ೨ ಕೋಟಿ ಮೌಲ್ಯದ ವಾಹನಗಳು ಜಪ್ತಿಮಾಡಿದ್ದಾರೆ.
ಕೆಂಗೇರಿಯ ಬಂಡೇಮಠದ ಸೋಮೇಶ್(೪೬) ಜ್ಞಾನಭಾರತಿಯ ಉಲ್ಲಾಳ ಉಪನಗರದ ಸಂತೋಷ್ ಅಲಿಯಾಸ್ ಅಪ್ಪು(೩೭)ಹಾಗೂ ಸೋಲದೇವನಹಳ್ಳಿಯ ಪ್ರಭಾಕರ್(೪೩)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳಿಂದ ೨ ಕೋಟಿ ಮೌಲ್ಯದ ೧೦ ಕಾರುಗಳು ಹಾಗೂ ಸ್ಕೂಟರ್ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿಲ್ಸನ್ ಗಾರ್ಡನ್ ಮೆಹಬೂಬ್ ಲೇಔಟ್ ನ ಉಮರ್ ನಗರ ನೌಷಾದ್ ಖಾನ್ ಅವರು ಕಳೆದ ಸೆ.೩ರಂದು ನೀಡಿದ ದೂರಿನಲ್ಲಿ ಪರಿಚಯದ ಕಾರು ಡೀಲರ್‌ವೊಬ್ಬರು ಟಯೋಟಾ ಫಾರ್ಚುನರ್ ಕಾರು ಇರುವುದಾಗಿ ತಿಳಿಸಿ, ಅದರ ಫೋಟೋಗಳನ್ನು ವಾಟ್ಸ್‌ಆ?ಯಪ್‌ನಲ್ಲಿ ಕಳುಹಿಸಿ ಕಾರು ಖರೀದಿಗೆ ಮುಂಗಡವಾಗಿ ೨೦ ಸಾವಿರವನ್ನು ಫೋನ್‌ಪೇ ಮೂಲಕ ಪಾವತಿಸಿದ ಬಳಿಕ, ವಿಲ್ಸನ್ ಗಾರ್ಡನ್ ಪಾರ್ಕ್ ಬಳಿ ಕಾರನ್ನು ತಂದು ತೋರಿಸಿ ಆರ್‌ಸಿ ಕಾರ್ಡ್ ಸಮೇತ ಹಸ್ತಾಂತರಿಸಿದ್ದರು. ಆದರೆ ಆರ್‌ಸಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ಬೆಳಕಿಗೆ ಬಂದಿತ್ತು ತಿಳಿಸಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸೆ.೧೪ರಂದು ಕಾರು ಡೀಲರ್‌ನ ಸಹಚರನೊಬ್ಬನನ್ನು ವಶಕ್ಕೆ ಪಡೆದು ನಡೆಸಿದ ವಿಚಾರಣೆ ವೇಳೆ ಆರೋಪಿಗಳು ನಕಲಿ ಆರ್‌ಸಿ ಕಾರ್ಡ್‌ಗಳು, ಬ್ಯಾಂಕ್ ಎನ್‌ಒಸಿಗಳು ಹಾಗೂ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ಸೀಲ್‌ಗಳನ್ನು ಸಿದ್ಧಪಡಿಸಿ, ಅವುಗಳನ್ನು ಬಳಸಿ ಕಾರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ.
ಆರೋಪಿಯ ವಶದಿಂದ ನಕಲಿ ಆರ್‌ಸಿ ಕಾರ್ಡ್‌ಗಳು, ಕಾರ್ಡ್ ತಯಾರಿಸುವ ಯಂತ್ರ, ವಿವಿಧ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ಸೀಲ್‌ಗಳು, ಸ್ಟಾಂಪ್ ಪೇಪರ್‌ಗಳು, ಕಂಪ್ಯೂಟರ್ ಹಾಗೂ ಪ್ರಿಂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್ ಅಭಿರಕ್ಷೆಗೆ ಪಡೆದು ವಿಚಾರಣೆ ನಡೆಸಿದಾಗ, ಕಾರು ಡೀಲರ್ ಹಾಗೂ ಇತರ ಸಹಚರರ ಬಗ್ಗೆ ಮಾಹಿತಿ ದೊರೆತಿದೆ.
ಈ ಮಾಹಿತಿ ಆಧರಿಸಿ ಸೆ.೨೧ರಂದು ಮತ್ತೋರ್ವ ಸಹಚರನನ್ನು ವಿಚಾರಣೆಗೊಳಪಡಿಸಲಾಗಿದ್ದು, ನಕಲಿ ಆರ್‌ಸಿ ಕಾರ್ಡ್‌ಗಳನ್ನು ಬಳಸಿ ವಂಚಿಸಿದ್ದ ಕಾರುಗಳನ್ನು ಮಾರಾಟ ಮಾಡಲು ಬಿಟಿಎಸ್ ರಸ್ತೆಯ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ಬಾಯ್ಬಿಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ತೆರಳಿ ೯ ಕಾರುಗಳು, ಒಂದು ದ್ವಿಚಕ್ರ ವಾಹನ ಹಾಗೂ ನಕಲಿ ಆರ್‌ಸಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದೂರುದಾರರ ಬಳಿಯಿದ್ದ ಟಯೋಟಾ ಫಾರ್ಚುನರ್ ಕಾರನ್ನೂ ಠಾಣೆಗೆ ತರಲಾಗಿದೆ.
ಇದಲ್ಲದೆ, ಸೆ.೨೨ರಂದು ಡಬಲ್ ರೋಡ್ ಬಳಿ ಮತ್ತೋರ್ವ ಸಹಚರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ಪ್ರಕರಣದ ಪ್ರಮುಖ ಕಾರು ಡೀಲರ್ ಹಾಗೂ ಇತರ ಸಹಚರರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ ಎಂದು ಹೇಳಿದರು.
ಈ ಕಾರ್ಯಾಚರಣೆಯನ್ನು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಅಕ್ಷಯ್ ಎಂ. ಹಾಕೆ ಎಸಿಪಿ ಸುದೀರ್ ಎಸ್. ಅವರ ಮಾರ್ಗದರ್ಶನದಲ್ಲಿ, ವಿಲ್ಸನ್ ಗಾರ್ಡನ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ಕೆ. ಹಾಗೂ ಸಿಬ್ಬಂದಿ ಕೈಗೊಂಡಿದ್ದರು ಎಂದು ತಿಳಿಸಿದರು.
























