
ಬೆಂಗಳೂರು, ಸೆ. ೨೩- ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಆರ್ಥಿಕತೆ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಫಲರಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್‌ನ ಶಾಸಕರುಗಳು ವಿಧಾನಸೌಧದ ಮುಂದೆ ಧರಣಿ ನಡೆಸಿದರು.
ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಿಜೆಪಿ ಮತ್ತು ಜೆಡಿಎಸ್‌ನ ಎಲ್ಲಾ ವಿಧಾನಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಪ್ರತಿಪಕ್ಷ ನಾಯಕರುಗಳಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ರಾಜ್ಯದ ಖಜಾನೆ ಖಾಲಿಯಾಗಿರುವುದನ್ನು ಸಂಕೇತಿಸಲು ಪ್ರತಿಭಟನಾನಿರತ ಬಿಜೆಪಿ ಮತ್ತು ಜೆಡಿಎಸ್ ಶಾಸಕರುಗಳು ಖಾಲಿ ಚೆಂಬು, ತೆಂಗಿನ ಚಿಪ್ಪುಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ರಾಜ್ಯ ಆರ್ಥಿಕ ಇಲಾಖೆಯೇ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಪತ್ರ ಬರೆದಿದೆ. ಸರ್ಕಾರ ಪಾಪರ್ ಆಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಆರ್ಥಿಕ ಇಲಾಖೆ ಮೇಲೆ ನಿಯಂತ್ರಣ ಇಲ್ಲ. ಆರ್ಥಿಕ ಸ್ಥಿತಿ ಹಳ್ಳ ಹಿಡಿದಿದೆ ಎಂದು ಪ್ರತಿಭಟನಾನಿರತ ಬಿಜೆಪಿ ಮತ್ತು ಜೆಡಿಎಸ್ ಶಾಸಕರುಗಳು ಘೋಷಣೆ ಕೂಗಿ ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಬೋಗಸ್ ಘೋಷಣೆ, ಡಿ.ಕೆ. ಕ್ಯಾಬಿನೆಟ್ ಬೋಗಸ್ ಕ್ಯಾಬಿನೆಟ್ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.
ಖಜಾನೆ ಖಾಲಿ.. ಖಾಲಿ.. ಸರ್ಕಾರ ಪಾಪರ್ ಎಂಬ ಘೋಷಣೆಗಳನ್ನು ಕೂಗಲಾಯಿತು.
ಸಿಎಂ ರಾಜೀನಾಮೆಗೆ ಆಗ್ರಹ
ಈ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಹಣಕಾಸು ಇಲಾಖೆ ನಿಭಾಯಿಸಲು ಮುಖ್ಯಮಂತ್ರಿಗಳಿಂದ ಆಗುತ್ತಿಲ್ಲ. ಡಿ.ಕೆ. ಶಿವಕುಮಾರ್ ರವರು ಮುಖ್ಯಮಂತ್ರಿ ಆಗಿರಲು ಲಾಯಕ್ ಇಲ್ಲ. ತಕ್ಷಣವೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಇದು ಪಾಪರ್ ಸರ್ಕಾರ, ಇವತ್ತು ಕರ್ನಾಟಕದಲ್ಲಿ ಸರ್ಕಾರ ನಡೆಸುವಂತಹ ಯೋಗ್ಯತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಡಿ.ಕೆ. ಶಿವಕುಮಾರ್ ಸರ್ಕಾರ ದಿವಾಳಿ ಆಗಿರುವುದಕ್ಕೆ ಹಣಕಾಸು ಇಲಾಖೆಯವರು ಶ್ವೇತಪತ್ರ ಬಿಡುಗಡೆ ಮಾಡಿ ಬಿಟ್ಟಿದ್ದಾರೆ ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ರವರು ಮೊನ್ನೆ ಮಂಗಳೂರಿಗೆ ಹೋಗಿ ೩೨ ಸಾವಿರ ಕೋಟಿ ರೂ. ಅಭಿವೃದ್ಧಿಗೆ ಘೋಷಿಸಿದರು. ಹಿಂದೆ ಸಿದ್ದರಾಮಯ್ಯ ಸಹ ಸಾವಿರಾರು ಕೋಟಿ ಅಭಿವೃದ್ಧಿಗೆ ಘೋಷಣೆ ಮಾಡಿದ್ದರು. ಆದರೆ ಸರ್ಕಾರದಲ್ಲಿ ಹಣವೇ ಇಲ್ಲ. ಬರ ಪರಿಹಾರ ಕಾರ್ಯಕ್ಕೆ ದುಡ್ಡು ಕೊಡಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಖಾಲಿ ಡಬ್ಬ ಎನ್ನುವುದು ಇಂದು ಗೊತ್ತಾಗುತ್ತಿದೆ. ೫ ತಿಂಗಳಾಯ್ತು ಬಡವರಿಗೆ ಪಿಂಚಣಿ ಹೋಗಿಲ್ಲ, ಶಿಕ್ಷಕರಿಗೆ ಸಂಬಳ ಇಲ್ಲ, ಹಾಲು ಉತ್ಪಾದಕರಿಗೆ ಸಬ್ಸಿಡಿ ಹಣ ಕೊಟ್ಟಿಲ್ಲ ಎಂದು ದೂರಿದರು.
ಡಿ.ಕೆ. ಶಿವಕುಮಾರ್ ರವರು ಕ್ಯಾಬಿನೆಟ್ ಮಾಡಿ ಘೋಷಣೆ ಮಾಡಿದ್ದಷ್ಟೇ ಭಾಗ್ಯ. ಇದು ಘೋಷಣೆಗಳ ಸರ್ಕಾರ, ಬೋಗಸ್ ಸರ್ಕಾರ ಎಂದು ಟೀಕಿಸಿದರು.
ಶ್ವೇತಪತ್ರಕ್ಕೆ ಬಿವೈವಿ ಒತ್ತಾಯ
ಇದೇ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ೪ ಲಕ್ಷಕ್ಕೂ ಹೆಚ್ಚು ಕೋಟಿ ಹೊಸ ಸಾಲ ಮಾಡಿದೆ. ಒಟ್ಟಾರೆಯಾಗಿ ೮ ಲಕ್ಷ ಕೋಟಿ ರೂಪಾಯಿ ಸಾಲ ಆಗಿದೆ. ಸಾಲ ಬಿಟ್ಟರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ದೂರಿದರು.
ಖಜಾನೆಯಲ್ಲಿ ಹಣ ಇಲ್ಲದಿದ್ದರೂ ಪುಕ್ಕಟ್ಟೆ ಘೋಷಣೆಗಳನ್ನು ಮಾಡಬೇಡಿ ಎಂದು ಒತ್ತಾಯಿಸಿದ ಅವರು, ಬರ ಪರಿಹಾರಕ್ಕೆ ಕೊಡುವುದಕ್ಕೂ ಹಣ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ಹಣಕಾಸಿನ ಪರಿಸ್ಥಿತಿ ಕುಲಗೆಟ್ಟು ಹೋಗಿದೆ ಎಂದು ಹರಿಹಾಯ್ದರು.
ಈ ಸರ್ಕಾರ ಐಸಿಯುನಲ್ಲಿದೆ. ಅಭಿವೃದ್ಧಿಗೆ ಹಣ ಇಲ್ಲ. ಕೇವಲ ಜಾಹೀರಾತುಗಳನ್ನು ಕೊಟ್ಟು ದಿನ ಕಳೆಯುತ್ತಿದ್ದಾರೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಖಜಾನೆ ಖಾಲಿಯಾಗಿದ್ದರೂ ಈ ಸರ್ಕಾರ ಕೇಂದರ ಸರ್ಕಾರದ ಮೇಲೆ ಗೂಬೆ ಕೂರಿಸುವ ಹುನ್ನಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
























