Home ಜಿಲ್ಲೆ ಕಲಬುರಗಿ ಉಕ್ಕಿ ಹರಿದ ಒಳಚರಂಡಿ; ನಿವಾಸಿಗಳ ಸಂಕಷ್ಟ

ಉಕ್ಕಿ ಹರಿದ ಒಳಚರಂಡಿ; ನಿವಾಸಿಗಳ ಸಂಕಷ್ಟ

ಕಲಬುರಗಿ,ಜೂ 25: ನಗರದ ವಾರ್ಡ್ ನಂ. 25ರ ವಿಶ್ವರಾಧ್ಯ ಕಾಲೋನಿ ಮತ್ತು ಕೈಲಾಸ್ ನಗರ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಒಳಚರಂಡಿ ಚೇಂಬರ್‍ಗಳು ತುಂಬಿ ಹೊಲಸು ನೀರು ರಸ್ತೆಗಳಲ್ಲಿ ಹಾಗೂ ಮನೆಗಳೊಳಗೆ ಹರಿಯುತ್ತಿದೆ. ಇದರಿಂದ ವೃದ್ಧರು, ಮಕ್ಕಳು ಸಂಚರಿಸಲು ಸಾಧ್ಯವಾಗುತ್ತಿಲ್ಲ. ಬಟ್ಟೆ ಒಗೆಯಲು ಹಾಗೂ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಹ ತೊಂದರೆಯಾಗುತ್ತಿದೆ ಎಂದು ಅಲ್ಲಿನ ನಾಗರಿಕರು ದೂರಿದ್ದಾರೆ.
ಹೊಲಸು ನೀರು ನೆಲದಲ್ಲಿ ಇಳಿದು ಬೋರ್‍ವೆಲ್ ನೀರನ್ನು ಕಲುಷಿತಗೊಳಿಸುತ್ತಿದ್ದು, ಅದೇ ನೀರನ್ನು ಕುಡಿಯುವ ಪರಿಸ್ಥಿತಿ ಉಂಟಾಗಿದೆ. ಇದರ ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ಅನೇಕರು ಅಸ್ವಸ್ಥರಾಗುವ ಭೀತಿಯಲ್ಲಿದ್ದಾರೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದ ಕಾರಣ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಮಳೆ ಬಂದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು, ಹೊಲಸು ನೀರು ಮನೆಗಳೊಳಗೆ ನುಗ್ಗುತ್ತಿದೆ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ .ಜನಪ್ರತಿನಿಧಿಗಳು ಈ ಸಮಸ್ಯೆಯತ್ತ ಗಮನ ಹರಿಸಬೇಕು.ಶುದ್ಧ ನೀರು, ಸ್ವಚ್ಛ ಪರಿಸರ ಮತ್ತು ತಕ್ಷಣದ ಪರಿಹಾರಕ್ಕಾಗಿ ವಾರ್ಡ್ ನಂ. 25ರ ನಾಗರಿಕರು ಆಗ್ರಹಿಸಿದ್ದಾರೆ.