
ಬೆಂಗಳೂರು, ಸೆ.೧೬: ನಗರದ ಸಂಚಾರ ಸಮಸ್ಯೆ ನಿವಾರಣೆ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಬಿಎ ಹಾಗೂ ಬೆಂಗಳೂರು ನಗರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಠಾಣೆಗಳ ಆವರಣ ಹಾಗೂ ರಸ್ತೆ ಬದಿ ಹಲವು ವರ್ಷಗಳಿಂದ ನಿಂತಿರುವ ಜಪ್ತಿ ವಾಹನಗಳನ್ನು ನಗರದ ಹೊರವಲಯದಲ್ಲಿರುವ ಜಿಬಿಎಗೆ ಸೇರಿದ ಖಾಲಿ ಜಾಗಗಳಿಗೆ ಸ್ಥಳಾಂತರಿಸುವ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಜಯನಗರ ನಾಲ್ಕನೇ ಬ್ಲಾಕ್ನ ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ ನೀಡಿದರು. ಇದೇ ವೇಳೆ ಠಾಣೆಯಲ್ಲಿ ದೀರ್ಘಕಾಲದಿಂದ ನಿಂತಿದ್ದ ೧೧೧ ಜಪ್ತಿ ವಾಹನಗಳನ್ನು ನಗರದ ಹೊರವಲಯದಲ್ಲಿರುವ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪೊಲೀಸ್ ಠಾಣೆಗಳ ಮುಂಭಾಗ ಹಾಗೂ ಸುತ್ತಮುತ್ತ ವರ್ಷಗಳಿಂದ ನಿಂತಿರುವ ಹಳೆಯ ಮತ್ತು ಜಪ್ತಿ ವಾಹನಗಳಿಂದ ಠಾಣೆಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗಿತ್ತು. ಅಲ್ಲದೆ ಕೆಲವೆಡೆ ಇಂತಹ ವಾಹನಗಳು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿದ್ದರಿಂದ ಜನರು ಓಡಾಡಲು ತೊಂದರೆಯಾಗುತ್ತಿತ್ತು. ಹೀಗಾಗಿ ಠಾಣೆಗಳಲ್ಲಿರುವ ವಾಹನಗಳನ್ನು ತೆರವುಗೊಳಿಸಿ, ಪ್ರಕರಣಗಳು ಇತ್ಯರ್ಥವಾಗುವವರೆಗೆ ಸುರಕ್ಷಿತ ಸ್ಥಳದಲ್ಲಿ ಇರಿಸಲು ಕ್ರಮ ಕೈಗೊಳ್ಳಲಾಗಿದೆ.
೨೬ ಎಕರೆ ಜಾಗ ಗುರುತು:
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಬೆಂಗಳೂರಿನ ಹಳೆಯ ಸಮಸ್ಯೆಗಳನ್ನು ಗುರುತಿಸಿ ಜನರ ದೈನಂದಿನ ಬದುಕಿಗೆ ಎದುರಾಗುತ್ತಿರುವ ತೊಂದರೆಗಳನ್ನು ಪರಿಹರಿಸುವ ಕೆಲಸ ನಡೆಯುತ್ತಿದೆ ಎಂದರು.
“ಫುಟ್ಪಾತ್ ತೆರವು, ಅನಾಥವಾಗಿ ಬಿದ್ದಿರುವ ವಾಹನಗಳ ಟೋಯಿಂಗ್, ಡೆಬ್ರಿಸ್ ತೆರವು ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹತ್ತಾರು ವರ್ಷಗಳಿಂದ ಜಪ್ತಿಯಾಗಿರುವ ವಾಹನಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ” ಎಂದು ಹೇಳಿದರು.
ಪೊಲೀಸ್ ಠಾಣೆಗಳ ಬಳಿ ವಾಹನಗಳು ನಿಂತಿರುವುದರಿಂದ ಸಾರ್ವಜನಿಕರಿಗೆ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿದ್ದವು. ಶಾಸಕರು, ಸಂಸದರು ಕೂಡ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಪೂರ್ವಭಾವಿ ಸಭೆಗಳನ್ನು ನಡೆಸಿ, ವಾಹನಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
೧೧,೩೪೬ ವಾಹನಗಳು
ನಗರದ ವಿವಿಧ ಪೊಲೀಸ್ ಠಾಣೆಗಳ ಸುತ್ತಮುತ್ತ ಒಟ್ಟು ೧೧,೩೪೬ ಜಪ್ತಿ ವಾಹನಗಳು ನಿಂತಿವೆ. ಇವುಗಳಲ್ಲಿ ಹಲವು ವಾಹನಗಳು ೧೫?೨೦ ವರ್ಷಗಳಿಂದ ಠಾಣೆಗಳಲ್ಲೇ ಉಳಿದಿವೆ. ಹಲವು ವಾಹನಗಳು ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿರುವುದರಿಂದ ಪ್ರಕರಣ ಇತ್ಯರ್ಥವಾಗುವವರೆಗೆ ಅವುಗಳನ್ನು ವಿಲೇವಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಂತಹ ವಾಹನಗಳನ್ನು ಬೇರೆಡೆ ಸ್ಥಳಾಂತರಿಸಿ, ಠಾಣೆ ಆವರಣವನ್ನು ಮುಕ್ತಗೊಳಿಸಲಾಗುತ್ತಿದೆ.
ವಾಹನಗಳನ್ನು ನಿಲ್ಲಿಸಲು ಜಾಗ ಒದಗಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಏಳು ಕಡೆ ಒಟ್ಟು ೨೬ ಎಕರೆ ಜಾಗ ಒದಗಿಸಿದೆ. ಇಂದಿನಿಂದ ವಾಹನಗಳ ಸ್ಥಳಾಂತರ ಕಾರ್ಯ ಆರಂಭವಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಸಾಧ್ಯವಾದಷ್ಟು ವಾಹನಗಳನ್ನು ಸ್ಥಳಾಂತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಅನಾಥವಾಗಿ ರಸ್ತೆ ಬದಿ ನಿಂತಿರುವ ವಾಹನಗಳ ವಿರುದ್ಧವೂ ಕ್ರಮ ಮುಂದುವರಿದಿದೆ. ಈಗಾಗಲೇ ೨,೦೨೪ ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, ಮಾಲೀಕರು ಬಂದು ವಾಹನಗಳನ್ನು ತೆಗೆದುಕೊಂಡು ಹೋಗದಿರುವ ಪ್ರಕರಣಗಳಲ್ಲಿ ಟೋಯಿಂಗ್ ಕಾರ್ಯ ಕೈಗೊಳ್ಳಲಾಗುತ್ತಿದೆ.
“ಜಯನಗರ ನಾಲ್ಕನೇ ಬ್ಲಾಕ್ನಲ್ಲಿ ಗುಜರಿ ವಾತಾವರಣ ಕಾಣಿಸುತ್ತಿದೆ. ಇದರಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುವುದರ ಜತೆಗೆ ಅಕ್ರಮ ಚಟುವಟಿಕೆಗಳಿಗೆ ಅವಕಾಶವಾಗುವ ಸಾಧ್ಯತೆಯಿದೆ. ಇದು ಇಂದಿನ ಸಮಸ್ಯೆಯಲ್ಲ; ೧೫?೨೦ ವರ್ಷಗಳಿಂದ ಪೊಲೀಸ್ ಇಲಾಖೆಗೆ ಎದುರಾಗಿರುವ ಸಮಸ್ಯೆಯಾಗಿದೆ. ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ, ನಿರುಪಯುಕ್ತ ಸ್ಥಿತಿಗೆ ತಲುಪಿರುವ ಸರ್ಕಾರಿ ವಾಹನಗಳ ತೆರವಿಗೂ ಕ್ರಮ ಕೈಗೊಳ್ಳಲಾಗುವುದು” ಎಂದು ಕೃಷ್ಣ ಬೈರೇಗೌಡ ಹೇಳಿದರು.
ಜಿಬಿಎ ಹಾಗೂ ಬೆಂಗಳೂರು ಪೊಲೀಸರ ಸಂಯೋಜಿತ ಕಾರ್ಯಾಚರಣೆಯಿಂದ ಪೊಲೀಸ್ ಠಾಣೆಗಳ ಸುತ್ತಲಿನ ಜಾಗ ಮುಕ್ತವಾಗುವುದರ ಜತೆಗೆ ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಅಡ್ಡಿ ಕಡಿಮೆಯಾಗುವ ನಿರೀಕ್ಷೆಯಿದೆ.
































