
ವಿಶೇಷ ವರದಿ : ಕೆ.ಪ್ರತಾಪ್, ಹುಣಸೂರು
ಬೆಂಗಳೂರು /ಹುಣಸೂರು,ಮೇ.೨೫-ರಾಜ್ಯ ಸರ್ಕಾರವು ಮಕ್ಕಳ ಮೂಲಭೂತ ಶಿಕ್ಷಣ ಹಕ್ಕು ಆರ್.ಟಿ.ಇ (ರೈಟ್ ಟು ಎಜುಕೇಶನ್ ) ಕೋಟಾದಡಿ ೯ ಮತ್ತು ೧೦ನೇ ತರಗತಿಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೌಲಭ್ಯವನ್ನು ವಿಸ್ತರಿಸಿ ಮಹತ್ವದ ಆದೇಶ ನೀಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಈ ವಿದ್ಯಾರ್ಥಿಗಳು ತಮ್ಮದೇ ಆದ ಖಾಸಗಿ ಶಾಲೆಗಳಲ್ಲಿ ಶುಲ್ಕರಹಿತವಾಗಿ ಮುಂದುವರಿಯುವುದನ್ನು ಖಚಿತಪಡಿಸಲು ಕೆಲ ನಿರ್ದೇಶನಗಳನ್ನು ಸಹ ನೀಡಿದೆ.
ಪ್ರಮುಖ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳು
೨೦೨೫-೨೬ನೇ ಶೈಕ್ಷಣಿಕ ಸಾಲಿನಲ್ಲಿ ಆರ್.ಟಿ.ಇ ಕೋಟಾದಡಿ ೮ನೇ ತರಗತಿಯನ್ನು ಪೂರ್ಣಗೊಳಿಸಿದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಈ ವಿಸ್ತರಣೆಯು ಅನ್ವಯಿಸಲಿದ್ದು, ಅರ್ಹ ವಿದ್ಯಾರ್ಥಿಗಳು ೯ನೇ ತರಗತಿಗೆ ಬಡ್ತಿ ಪಡೆದು, ಅದೇ ಖಾಸಗಿ ಶಾಲೆಯಲ್ಲಿ ೧೦ನೇ ತರಗತಿಯವರೆಗೆ ಮುಂದುವರಿಯಬಹುದು.
ಪೋಷಕರು ಈಗಾಗಲೇ ಅದೇ ಶಾಲೆಯಲ್ಲಿ ೯ನೇ ತರಗತಿಯ ಶುಲ್ಕವನ್ನು ಪಾವತಿಸಿದ್ದರೆ, ಶಾಲಾ ಆಡಳಿತ ಮಂಡಳಿಯು ಪೋಷಕರು ಕಟ್ಟಿರುವ ಶುಲ್ಕವನ್ನು ಕಡ್ಡಾಯವಾಗಿ ಮರುಪಾವತಿಸಬೇಕು.
ಟಿ. ಸಿ ನೀಡಿದರು ಪುನಃ ಅವಕಾಶ ವಿದ್ಯಾರ್ಥಿಗಳ ವರ್ಗಾವಣೆ ಪ್ರಮಾಣಪತ್ರಗಳನ್ನು (ಟಿ. ಸಿ ) ಈಗಾಗಲೇ ನೀಡಿದ್ದರೂ ಸಹ, ಅದೇ ಶಾಲೆಯಲ್ಲಿ ೯ ಮತ್ತು ೧೦ನೇ ತರಗತಿಗಳು ಲಭ್ಯವಿದ್ದರೆ ಮತ್ತು ಮಗು ಅಲ್ಲಿಯೇ ಓದಲು ಇಚ್ಛಿಸಿದರೆ, ಪೋಷಕರು ತಮ್ಮ ಮಕ್ಕಳನ್ನು ಅದೇ ಶಾಲೆಯಲ್ಲಿ ಮುಂದುವರಿಸಲು ಶಾಲಾ ಆಡಳಿತ ಮಂಡಳಿ ಅವಕಾಶವನ್ನು ಕಲ್ಪಿಸಬೇಕು.
ಖಾಸಗಿ ಶಾಲೆಗಳ ಎಚ್ಚರಿಕೆ
೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಸಮಾಜ ಕಲ್ಯಾಣ ಇಲಾಖೆಯು ಭರಿಸಲಿದ್ದು, ಈ ಯೋಜನೆಗಾಗಿ ೧೯ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಆದರೂ ಆರ್.ಟಿ.ಇ ಕಾಯ್ದೆ ೨೦೦೯ ರ ಪ್ರಕಾರ ಉಚಿತ ಶಿಕ್ಷಣವು ಕೇವಲ ಪ್ರಾಥಮಿಕ ಶಿಕ್ಷಣಕ್ಕೆ (೮ನೇ ತರಗತಿಯವರೆಗೆ) ಮಾತ್ರ ಸೀಮಿತವಾಗಿದೆ ಎಂದು ವಾದಿಸುತ್ತಿರುವ ಕೆಲ ಖಾಸಗಿ ಅನುದಾನರಹಿತ ಶಾಲೆಗಳು ಈ ಆದೇಶವನ್ನು ಬಲವಾಗಿ ವಿರೋಧಿಸುತ್ತಿವೆ. ಸರ್ಕಾರದ ಕಡೆಯಿಂದ ಸ್ಪಷ್ಟವಾದ ಲಿಖಿತ ಆದೇಶಗಳು ಬಂದಿಲ್ಲ ಎಂದು ಹೇಳಿ, ಕೆಲವು ಶಾಲೆಗಳು ಪೋಷಕರಿಂದ ಹೆಚ್ಚಿನ ಶುಲ್ಕವನ್ನು ವಸೂಲಿ ಮಾಡಲು ಮುಂದಾಗಿವೆ, ಇದರಿಂದಾಗಿ ಆರಂಭಿಕ ಹಂತದಲ್ಲಿ ಕೆಲ ಸಮಸ್ಯೆಗಳು ಉಂಟಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಕಾಯ್ದೆಯನ್ನು ಅಧಿಕೃತವಾಗಿ ತಿದ್ದುಪಡಿ ಮಾಡದಿದ್ದರೆ ಅಥವಾ ಪ್ರತಿ ಮಗುವಿನ ಶಿಕ್ಷಣ ವೆಚ್ಚಕ್ಕೆ ತಕ್ಕಂತೆ ಸರ್ಕಾರವು ಸೂಕ್ತ ಪರಿಹಾರ ನೀಡದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿವೆ.
ಸರ್ಕಾರಗಳು ಕೂಡ ಖಾಸಗಿ ಶಾಲೆಗಳಿಗೆ ನಿಗದಿಪಡಿಸಿದ ಶುಲ್ಕವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡದೆ ಸತಾಯಿಸುವುದು ಖಾಸಗಿ ಶಾಲೆಗಳಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರ ಸರಿಯಾದ ಸಮಯಕ್ಕೆ ಹಣ ಬಿಡುಗಡೆಗೊಳಿಸಿದರೆ, ಶಾಲೆಗಳ ನಿರ್ವಹಣೆ ಮಾಡುವುದು ನಮಗೂ ಅನುಕೂಲವಾಗುತ್ತದೆ ಎಂಬುದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒತ್ತಾಯ.


























