
ಬೆಂಗಳೂರು, ಮೇ. ೨೫- ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಲೂಟಿ ಹೊಡೆಯುವುದಕ್ಕೆ ಕೊನೆ ಎಂಬುದೇ ಇಲ್ಲದಂತಾಗಿದೆ. ಸಾರ್ವಜನಿಕರನ್ನು ನಿರಂತರವಾಗಿ ಲೂಟಿ ಮಾಡುತ್ತಿರುವ ಈ ನಡೆ ಸಂಪೂರ್ಣ ದೇಶವಿರೋಧಿಯಾಗಿದೆ,” ಎಂದು ಕಿಡಿಕಾರಿದರು.
’ನಬಿನ್ ಬಂದ ಬೆನ್ನಲ್ಲೇ ಬೆಲೆ ಏರಿಕೆಯ ಗಿಫ್ಟ್’
ಬಿಜೆಪಿ ನಾಯಕರಾದ ನಿತೀನ್ ನಬಿನ್ ನಿನ್ನೆ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಅವರು ಬಂದ ಬೆನ್ನಲ್ಲೇ ರಾಜ್ಯದಲ್ಲಿ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ಇದು ಕನ್ನಡಿಗರಿಗೆ ಬಿಜೆಪಿ ನೀಡಿದ ಅಪ್ಪಟ ’ಕೊಡುಗೆ’ಯಾಗಿದೆ. ಇಷ್ಟೆಲ್ಲಾ ದರ ಹೆಚ್ಚಳ ಮಾಡಿ ಜನರ ಜೀವನದ ಜೊತೆ ಆಟವಾಡುತ್ತಿದ್ದರೂ, ಬಿಜೆಪಿ ನಾಯಕರು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸುರ್ಜೇವಾಲಾ ತರಾಟೆಗೆ ತೆಗೆದುಕೊಂಡರು.
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ ಬರೋಬ್ಬರಿ ೧೦೮ ಡಾಲರ್ ಇತ್ತು. ಆದರೂ ಆಗ ಜನಸಾಮಾನ್ಯರ ಮೇಲೆ ಹೊರೆ ಹಾಕಿರಲಿಲ್ಲ. ಸದ್ಯ ಕಚ್ಚಾ ತೈಲ ಬೆಲೆ ಬ್ಯಾರಲ್‌ಗೆ ೯೭.೦೬ ಡಾಲರ್ ಆಸುಪಾಸಿನಲ್ಲಿದೆ. ಹೀಗಿದ್ದೂ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ೧೧೦ ರೂಪಾಯಿ ದಾಟಿದೆ. ಕಳೆದ ೧೧ ದಿನಗಳಲ್ಲೇ ಸತತ ೪ ಬಾರಿ ಬೆಲೆ ಏರಿಕೆ ಮಾಡಲಾಗಿದ್ದು, ಇದು ೭೦ ವರ್ಷಗಳ ಇತಿಹಾಸದಲ್ಲೇ ಅತಿ ದೊಡ್ಡ ಏರಿಕೆಯಾಗಿದೆ ಎಂದು ಸುರ್ಜೇವಾಲಾ ಅಂಕಿ-ಅಂಶಗಳ ಸಮೇತ ವಿವರಿಸಿದರು.
“ನಮ್ಮ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ ೭೧.೪೧ ರೂಪಾಯಿ ಇತ್ತು. ಇತ್ತೀಚಿನವರೆಗೂ ೯೮.೮೮ ರೂಪಾಯಿ ಇದ್ದ ಬೆಲೆಯನ್ನು ಏಕಾಏಕಿ ೧೧೦ ರೂಪಾಯಿಗೆ ಹೆಚ್ಚಿಸಲಾಗಿದೆ. ೩.೯೦ ಪೈಸೆ, ೯೧ ಪೈಸೆ, ೨ ರೂಪಾಯಿಯಂತೆ ಹಂತ ಹಂತವಾಗಿ ಸಾರ್ವಜನಿಕರಿಗೆ ಗೊತ್ತಾಗದಂತೆ ಬೆಲೆ ಏರಿಸಿ ವಂಚಿಸಲಾಗುತ್ತಿದೆ ಎಂದು ಅವರು ದೂರಿದರು.
ಸಿಲಿಂಡರ್, ಸಿಎನ್‌ಜಿ ದರ ಏರಿಕೆಗೆ ಹೋಟೆಲ್ ಉದ್ಯಮ ಕಂಗಾಲು
ಕೇವಲ ಇಂಧನ ಮಾತ್ರವಲ್ಲದೆ, ಅಡುಗೆ ಅನಿಲ (ಎಲ್‌ಪಿಜಿ) ಮತ್ತು ಸಿಎನ್‌ಜಿ ಬೆಲೆಯನ್ನೂ ಗಗನಕ್ಕೇರಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಹಿಂದೆ ೪೧೨ ರೂಪಾಯಿ ಇದ್ದ ಗೃಹಬಳಕೆಯ ಸಿಲಿಂಡರ್ ಬೆಲೆ ಈಗ ಸಾರ್ವಜನಿಕರಿಗೆ ಕೈಗೆಟುಕದಂತಾಗಿದೆ. ಇನ್ನು ಇತ್ತೀಚೆಗೆ ಐದು ಬಾರಿ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದ್ದು, ಸದ್ಯ ಅದರ ಬೆಲೆ ೩,೦೭೫ ರೂಪಾಯಿಗೆ ತಲುಪಿದೆ. ಇದರಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳು ಬೀದಿಗೆ ಬೀಳುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿದಿನ ೧,೦೦೦ ಕೋಟಿ ಲೂಟಿ ಆರೋಪ
ಕಳೆದ ೧೨ ವರ್ಷಗಳಲ್ಲಿ ಕೇಂದ್ರ ಸರ್ಕಾರ ಇಂಧನ ಮತ್ತು ತೆರಿಗೆಗಳ ಮೂಲಕ ಬರೋಬ್ಬರಿ ೫೭ ಲಕ್ಷ ಕೋಟಿ ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿದೆ. ಸದ್ಯ ಆರ್‌ಬಿಐನಲ್ಲೇ ೧೪ ಲಕ್ಷ ಕೋಟಿ ರೂಪಾಯಿ ಹಣವಿದೆ. ದೇಶದ ಸಣ್ಣ ವ್ಯಾಪಾರಿಗಳು, ನೌಕರರು ಮತ್ತು ರೈತರಿಂದ ಪ್ರತಿದಿನ ಅಂದಾಜು ೧,೦೦೦ ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸಿಎಂ ಆಕ್ರೋಶ
“ಕೇಂದ್ರದ ಬಿಜೆಪಿ ಸರ್ಕಾರವು ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಯನ್ನು ಸರಣಿಯಾಗಿ ಏರಿಸುವ ಮೂಲಕ ಸಾಮಾನ್ಯ ಜನರ ಮತ್ತು ಮಧ್ಯಮ ವರ್ಗದವರ ಜೀವನವನ್ನು ಅತ್ಯಂತ ದುಬಾರಿಯಾಗಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶವನ್ನು ಸಂಪೂರ್ಣವಾಗಿ ಲೂಟಿ ಹೊಡೆಯುತ್ತಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.
“ದೇಶದ ಇತಿಹಾಸದಲ್ಲಿ ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಬೆಲೆ ಏರಿಕೆಯಾಗಿರಲಿಲ್ಲ. ಕೇವಲ ಕಳೆದ ೧೧ ದಿನಗಳಲ್ಲಿ ಬರೋಬ್ಬರಿ ನಾಲ್ಕು ಬಾರಿ ತೈಲ ಬೆಲೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೧೧೦.೯೩ ಕ್ಕೆ ತಲುಪಿದೆ. ಇಷ್ಟು ಕಡಿಮೆ ಅವಧಿಯಲ್ಲಿ ತೈಲ ದರ ಬರೋಬ್ಬರಿ ೭.೫೨ ಪೈಸೆಯಷ್ಟು ಏರಿಕೆಯಾಗಿದೆ. ಇನ್ನು ಡೀಸೆಲ್ ಬೆಲೆಯೂ ಸಹ ೯೮.೮೯ ಪೈಸೆಗೆ ತಲುಪಿದ್ದು, ಬಹುಶಃ ಶೀಘ್ರದಲ್ಲೇ ೧೦೦ರ ಗಡಿ ದಾಟಲಿದೆ. ಹಿಂದೆ ಎಲ್ಲಿಯೂ ಇಂತಹ ಪರಿಸ್ಥಿತಿ ಬಂದಿರಲಿಲ್ಲ” ಎಂದು ಸಿಎಂ ಆತಂಕ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರದ ಅವಧಿಗೆ ಹೋಲಿಕೆ ಮಾಡಿದ ಮುಖ್ಯಮಂತ್ರಿಗಳು, “ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾಗತಿಕ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ (ಕಚ್ಚಾ ತೈಲ) ಬೆಲೆ ಗಗನಕ್ಕೇರಿತ್ತು. ಆದರೂ ಆಗ ದೇಶದಲ್ಲಿ ಪೆಟ್ರೋಲ್ ಬೆಲೆ ಕೇವಲ ೭೧.೪೧ ಪೈಸೆ ಹಾಗೂ ಡೀಸೆಲ್ ಬೆಲೆ ೫೧.೭೦ ಇತ್ತು. ಅಡುಗೆ ಅನಿಲ (ಸಿಲಿಂಡರ್) ಬೆಲೆ ಕೇವಲ ೪೧೨ ಇತ್ತು. ಆದರೆ ಇವತ್ತು ಸಿಲಿಂಡರ್ ಬೆಲೆ ೯೧೫.೫೦ ಆಗಿದೆ. ಅಂದರೆ ಬರೋಬ್ಬರಿ ೫೦೩ ರಷ್ಟು ದರ ಏರಿಕೆಯಾಗಿದೆ. ಇದಕ್ಕೆಲ್ಲ ಕಾರಣ ಯಾರು?” ಎಂದು ಪ್ರಶ್ನಿಸಿದರು.
“ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ೬೦ ರಿಂದ ೭೦ ಡಾಲರ್‌ಗೆ ಕುಸಿದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಷ್ಟೊಂದು ಕಡಿಮೆಯಾಗಿದ್ದರೂ, ಕೇಂದ್ರ ಸರ್ಕಾರ ಮಾತ್ರ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಇಳಿಸುತ್ತಿಲ್ಲ. ಕಚ್ಚಾ ತೈಲ ಅಗ್ಗವಾದ ಹಣದ ಲಾಭವನ್ನು ಜನ ಸಾಮಾನ್ಯರಿಗೆ ನೀಡದೆ ಮೋದಿ ಸರ್ಕಾರವೇ ಲೂಟಿ ಮಾಡುತ್ತಿದೆ. ಈ ತೈಲ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಿ ಇತರ ಎಲ್ಲಾ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಲಿದೆ. ಇದರಿಂದ ಸಾಮಾನ್ಯ ಜನರೇ ಕಷ್ಟಕ್ಕೆ ಸಿಲುಕಲಿದ್ದಾರೆ” ಎಂದು ಸಿಎಂ ದೂರಿದರು.
ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ನೆನಪಿಸಿದ ಸಿದ್ದರಾಮಯ್ಯ, “ಬಿಜೆಪಿಯವರು ಅಧಿಕಾರಕ್ಕೆ ಬರುವ ಮುನ್ನ ’ಅಚ್ಚೇ ದಿನ್’ (ಒಳ್ಳೆಯ ದಿನಗಳು) ತರುತ್ತೇವೆ ಎಂದಿದ್ದರು. ’ಗುಜರಾತ್ ಮಾದರಿ’ ಸರ್ಕಾರ ತರುತ್ತೇವೆ ಎಂದು ದೊಡ್ಡ ದೊಡ್ಡ ಭರವಸೆಗಳನ್ನು ಕೊಟ್ಟಿದ್ದರು. ಹಿಂದೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ತೈಲ ಬೆಲೆ ಏರಿಕೆಯಾದಾಗ ಆಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿಯವರು ಏನೆಲ್ಲಾ ಮಾತನಾಡಿದ್ದರು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಆದರೆ ಈಗ ತಾವೇ ಅಧಿಕಾರದಲ್ಲಿದ್ದುಕೊಂಡು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ” ಎಂದು ಟೀಕಿಸಿದರು.
ಸುದ್ದಿಗೋಷ್ಠಿಯ ಕೊನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳನ್ನೂ ನಗುತ್ತಲೇ ಕಾಲೆಳೆದರು. “ನೀವೆಲ್ಲರೂ ಸ್ಕೂಟರ್‌ನಲ್ಲೇ ಓಡಾಡ್ತೀರ ಅಲ್ವಾ? ನಿಮಗೂ ಈ ಬೆಲೆ ಏರಿಕೆಯ ಬಿಸಿ ತಟ್ಟಿದೆ ತಾನೇ? ಹಾಗಿದ್ದ ಮೇಲೆ ಇದರ ಬಗ್ಗೆ ಜನಸಾಮಾನ್ಯರಿಗೆ ಸರಿಯಾಗಿ ತಿಳಿಸಿ, ವರದಿ ಮಾಡಿ” ಎಂದು ಮಾರ್ಮಿಕವಾಗಿ ನುಡಿದರು.


























