
ಕಲಬುರಗಿ,ಮೇ.25-ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ರವಿಕುಮಾರ ಅಲಿಯಾಸ್ ರವಿ, ಅಲಿಯಾಸ್ ರವ್ಯಾ ತಂದೆ ತುಕಾರಾಮ (37)ನನ್ನು ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಮತ್ತು ಅಪರ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ನಗರದ ಸಿ.ಜೆ.ಕಾಲೋನಿಯ ಹನುಮಾನ ನಗರ ನಿವಾಸಿಯಾದ ರೌಡಿಶೀಟರ್ ರವಿಕುಮಾರ ರೂಢಿಗತ ಅಪರಾಧಿಯಾಗಿದ್ದು, ಈತನ ಮೇಲೆ ಒಟ್ಟು 9 ಪ್ರಕರಗಳು ದಾಖಲಾಗಿವೆ.
2008 ರಿಂದ 2026ರವರೆಗೆ 18 ಪ್ರಕರಣಗಳು, ಭಾರತೀಯ ನ್ಯಾಯ ಸಂಹಿತೆ ಕಾಯ್ದೆ-2023ರ ಅಡಿಯಲ್ಲಿ 2 ಪ್ರಕರಣಗಳು, ಸಿಆರ್‍ಪಿಸಿ ಅಡಿಯಲ್ಲಿ 2 ಪ್ರಕರಣಗಳು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಅಡಿಯಲ್ಲಿ 2 ಪ್ರಕರಣಗಳು ಸೇರಿ ಒಟ್ಟು 24 ಪ್ರಕರಣಗಳು ದಾಖಲಾಗಿದ್ದು, “ಎ”ರೌಡಿ ಎಂದು ಗುರುತಿಸಲಾಗಿದೆ.
ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಕಳ್ಳತನ, ಮಹಿಳೆಯರ ಮೇಲೆ ಹಲ್ಲೆ, ಜೀವ ಬೆದರಿಕೆಯಂತಹ ಘೋರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಆರೋಪಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಆರೋಪಿಯನ್ನು ಗುಂಡಾ ಕಾಯ್ದೆ ಅಡಿಯಲ್ಲಿ ಬಂಧನ ಮಾಡುವುದು ಸೂಕ್ತ ಎಂದು ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಗುರು ಪಾಟೀಲ ಅವರು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು ಆರೋಪಿಯನ್ನು ಗುಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದಾರೆ.























