Home ಮುಖಪುಟ ಸುದ್ದಿ ಕಾಂಗ್ರೆಸ್‌ನಿಂದ ಕಳ್ಳ ನಾಟಕ

ಕಾಂಗ್ರೆಸ್‌ನಿಂದ ಕಳ್ಳ ನಾಟಕ

ಬೆಂಗಳೂರು.ಮೇ೨೫: ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ, ಭಟ್ಕಳದ ಘರ್ಷಣೆ ಮತ್ತು ಸಿಎಂ ದೆಹಲಿ ಪ್ರವಾಸ ಸೇರಿದಂತೆ ಹಲವು ವಿಚಾರಗಳ ಕುರಿತು ಆಡಳಿತ ಪಕ್ಷದ ವಿರುದ್ಧ ಅವರು ಸರಣಿ ಆರೋಪಗಳನ್ನು ಮಾಡಿದ್ದಾರೆ.


ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, “ಇದೆಲ್ಲವೂ ಸರ್ಕಾರದ ಕಳ್ಳ ನಾಟಕ. ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದು ಒಂದು ನಿರಂತರ ಪ್ರಕ್ರಿಯೆ. ಅದಕ್ಕಾಗಿ ಪ್ರತ್ಯೇಕ ಅಭಿಯಾನ ಮಾಡುವ ಅಗತ್ಯವೇನಿದೆ” ಎಂದು ಪ್ರಶ್ನಿಸಿದರು.


ರಾಜ್ಯ ಸರ್ಕಾರ ಸಂಪೂರ್ಣವಾಗಿ ಪಾಪರ್ ಆಗಿದೆ. ಗ್ಯಾರಂಟಿಗಳನ್ನು ನೀಡಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದಕ್ಕಾಗಿಯೇ ಇಂತಹ ಸಬೂಬುಗಳನ್ನು ಹುಡುಕಲಾಗುತ್ತಿದೆ” ಎಂದು ಅವರು ಆರೋಪಿಸಿದರು. ಮೇ ೩೦ ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಹೋರಾಟವನ್ನು ‘ಬೋಗಸ್’ ಮತ್ತು ‘ಜನರಿಗೆ ಟೋಪಿ ಹಾಕುವ ತಂತ್ರ’ ಎಂದು ಅವರು ಬಣ್ಣಿಸಿದರು.

ಭಟ್ಕಳದಲ್ಲಿ ನಡೆದ ಘರ್ಷಣೆ ಹಾಗೂ ಕಟ್ಟೆ ಧ್ವಂಸ ಪ್ರಕರಣದ ಕುರಿತು ಆಕ್ರೋಶ ಹೊರಹಾಕಿದ ಅವರು, “ಮೊನ್ನೆ ತಾನೇ ಆಳಂದ ದರ್ಗಾ ಕೇಸ್‌ಗಳನ್ನು ಸರ್ಕಾರ ವಾಪಸ್ ಪಡೆದಿತ್ತು. ಇದರ ಬೆನ್ನಲ್ಲೇ ಭಟ್ಕಳದಲ್ಲಿ ಮುಸ್ಲಿಂ ಮತಾಂಧರು ಗಲಭೆ ನಡೆಸಿದ್ದಾರೆ. ಪೊಲೀಸರ ಎದುರೇ ಮುಖಿಡಿಚಿಛಿe ಕಟ್ಟೆಯನ್ನು ಏಕಾಏಕಿ ಒಡೆದು ಹಾಕಲಾಗಿದೆ. ಇವರೆಲ್ಲರೂ ಕುಕ್ಕರ್ ಬ್ರದರ್ಸ್ ಸಂತತಿಯವರು” ಎಂದು ಕಿಡಿಕಾರಿದರು.


ಪೊಲೀಸರು ಕೈಕಟ್ಟಿ ನಿಂತಿದ್ದರಿಂದ ಯಾರನ್ನೂ ಬಂಧಿಸಿಲ್ಲ, ಪ್ರಕರಣವನ್ನೂ ದಾಖಲಿಸಿಲ್ಲ ಎಂದ ಅವರು, “ನಾವೇನೇ ಮಾಡಿದರೂ ಸಿದ್ದರಾಮಯ್ಯ ಸರ್ಕಾರ ಕೇಸ್ ವಾಪಸ್ ಪಡೆಯುತ್ತದೆ ಎಂಬ ಭ್ರಮೆ ಗಲಭೆಕೋರರಲ್ಲಿದೆ. ಸರ್ಕಾರದ ಮುಸ್ಲಿಂ ಓಲೈಕೆ ಮತ್ತು ತುಷ್ಟೀಕರಣ ನೀತಿಯೇ ಇಂತಹ ಘಟನೆಗಳಿಗೆ ಕಾರಣ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಬೇಕು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಜರುಗಿಸಬೇಕು” ಎಂದು ಒತ್ತಾಯಿಸಿದರು.

ಇಂಧನ ದರ ಏರಿಕೆಯ ಕುರಿತು ಕಾಂಗ್ರೆಸ್ ಟೀಕೆಗಳಿಗೆ ಉತ್ತರಿಸಿದ ಅಶೋಕ್, “ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಾಗಿದೆ. ಸಾಮಾನ್ಯ ದಿನಗಳಿಗೂ, ಯುದ್ಧದ ದಿನಗಳಿಗೂ ವ್ಯತ್ಯಾಸವಿರುತ್ತದೆ ಎಂಬ ಕನಿಷ್ಠ ಕಾಮನ್ ಸೆನ್ಸ್ ಕಾಂಗ್ರೆಸ್‌ನವರಿಗಿಲ್ಲ” ಎಂದರು.
ಕಾಂಗ್ರೆಸ್ ಪಕ್ಷವನ್ನು ‘ಕಾಕ್ರೋಚ್ ಪಕ್ಷ’ ಎಂದು ಕರೆದರಲ್ಲದೆ, ಅದು ದೇಶ ವಿಭಜನೆಯ ಹಾಗೂ ದೇಶದ್ರೋಹದ ಟೂಲ್‌ಕಿಟ್ ಆಗಿದೆ ಮತ್ತು ಪಾಕಿಸ್ತಾನದ ಪರವಾಗಿ ನಿಲ್ಲುತ್ತದೆ ಎಂದು ಗಂಭೀರ ಆರೋಪ ಮಾಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿರುವ ವಿಚಾರವನ್ನು ಲೇವಡಿ ಮಾಡಿದ ಅಶೋಕ್, “ಹೈಕಮಾಂಡ್ ಕರೆದಿರುವುದು ಸಿದ್ದರಾಮಯ್ಯನವರನ್ನು ಒಬ್ಬರನ್ನೇ. ಆದರೆ ಅವರು ತಮ್ಮ ಪಟಾಲಂ ಅನ್ನೇ ಕರೆದುಕೊಂಡು ಹೋಗುತ್ತಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕೈಗೆ ಸಿಎಂ ಚಿಪ್ಪು ಕೊಡಲಿದ್ದಾರೆ” ಎಂದರು.


“ರಾಜ್ಯದಲ್ಲಿ ೧೩೬ ಸೀಟು ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾಗಿ ಡಿ.ಕೆ. ಶಿವಕುಮಾರ್ ಪದೇ ಪದೇ ಹೇಳಿಕೊಳ್ಳುತ್ತಾರೆ. ಆದರೆ ಅವರಿಗೆ ಸ್ವತಃ ತಮ್ಮ ರಾಜಕೀಯ ಭವಿಷ್ಯವನ್ನೇ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ೨೦೨೮ರ ವೇಳೆಗೆ ತಾವು ಮುಖ್ಯಮಂತ್ರಿಯಾಗುವುದಾಗಿ ಅವರು ಹೇಳುತ್ತಿದ್ದಾರೆ, ಆದರೆ ಆಗ ಅವರು ಕಾಂಗ್ರೆಸ್‌ನಲ್ಲಿ ಇರುತ್ತಾರೋ ಅಥವಾ ಬೇರೆ ಪಕ್ಷಕ್ಕೆ ಹೋಗುತ್ತಾರೋ ಯಾರಿಗೆ ಗೊತ್ತು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕಾಣುತ್ತಿಲ್ಲ, ಬದಲಿಗೆ ಡಿಕೆಶಿಗೆ ಖಾಲಿ ತಟ್ಟೆ ನೀಡುವಂತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿದರೆ, ರಾಜ್ಯದ ಜನತೆಯ ಮೇಲೆ ಇನ್ನೂ ೬೦ ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ತೆರಿಗೆ ವಿಧಿಸಲು ಅಧಿಕಾರಿಗಳು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಅಶೋಕ್ ಹೊಸ ಬಾಂಬ್ ಸಿಡಿಸಿದರು.