Home ಮುಖಪುಟ ಸುದ್ದಿ ಮನೆ ಮನೆಗೆ ಪೊಲೀಸ್‌ಗೆ ಒಂದು ವರ್ಷ

ಮನೆ ಮನೆಗೆ ಪೊಲೀಸ್‌ಗೆ ಒಂದು ವರ್ಷ

ಬೆಂಗಳೂರು,ಸೆ.೨೩-ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ದೇಶದಲ್ಲೇ ಮೊಟ್ಟಮೊದಲ ಬಾರಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಮನೆ ಮನೆಗೆ ಪೊಲೀಸ್’ ಯೋಜನೆಯು ಒಂದು ವರ್ಷ ಪೂರೈಸಿದೆ.


ಕಳೆದ ೨೦೨೫ರ ಜುಲೈ ೧೮ ರಂದು ರಾಜಧಾನಿ ಬೆಂಗಳೂರಿನಲ್ಲಿ ಆರಂಭಗೊಂಡ ಮನೆ ಮನೆಗೆ ಪೊಲೀಸ್ ಯೋಜನೆಗೆ ನಿರೀಕ್ಷಿತ ಯಶಸ್ಸು ದೊರೆಯದೇ ಇದ್ದರೂ ಜನ ಸಾಮಾನ್ಯರಲ್ಲಿ ಪೊಲೀಸ್ ಠಾಣೆ,ಪೊಲೀಸ್ ಎಂದರೆ ಭಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಕಾನೂನಿನ ಅರಿವು ಹೆಚ್ಚಾಗಿದೆ.


ಇದರ ಜೊತೆಗೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಿ ಯಾವುದೇ ರೀತಿಯ ಅಪರಾಧ ಕೃತ್ಯ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸುವುದು ಸ್ಥಳೀಯವಾಗಿ ಶಾಂತಿ ಸುವ್ಯವಸ್ಥೆ ನೆಲೆಸಲು ನಗರದಲ್ಲಿ ಮನೆ ಮನೆಗೆ ಪೊಲೀಸ್ ಯೋಜನೆ ಯಶಸ್ವಿಯಾಗಿದೆ.


ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸುವುದು, ಕಾನೂನಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಮನೆ ಮನೆಗೆ ಪೊಲೀಸ್ ಯೋಜನೆಯಿಂದ ಸಹಾಯವಾಗಿದೆ.


ಯೋಜನೆಯಿಂದ ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದುಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು, ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಸಾಧ್ಯವಾಗಿದೆ.


ಪೊಲೀಸ್ ವ್ಯವಸ್ಥೆಯಲ್ಲಿಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿ, ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸಲು ಯೋಜನೆಯು ತನ್ನದೇ ಆದ ಕೂಡುಗೆ ನೀಡಿದೆ.


ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಭ್ರಾತೃತ್ವ ಮತ್ತು ವಿಶ್ವಾಸವನ್ನು ಬೆಳೆಸಲು ಯೋಜನೆ ಸಹಾಯಕವಾಗಲಿದೆ ಎಂದು ಅಂದಿನ ಗೃಹ ಸಚಿವರಾಗಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಿ ಹೇಳಿದ್ದರು.


ಜನರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸೋಣ. ಅವರ ಸಮಸ್ಯೆಗಳನ್ನು ನಾವು ಪರಿಹರಿಸಿದಾಗ, ಅವರು ಇಲಾಖೆಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯವನ್ನು ರೂಪಿಸಲು ಪ್ರಾರಂಭಿಸುತ್ತಾರೆ ಎನ್ನುವ ಅವರ ಆಶಯ ಬಹುತೇಕ ಸಾಕಾರಗೊಂಡಂತಾಗಿದೆ.


ಸಮುದಾಯ ಕೇಂದ್ರಿತ ಪೊಲೀಸ್ ವ್ಯವಸ್ಥೆಯತ್ತ ಒಂದು ವ್ಯಾಪಕ ಬದಲಾವಣೆಯ ಭಾಗವಾಗಿದೆ. ಇದು ಕರ್ನಾಟಕದಾದ್ಯಂತ ನಾಗರಿಕರು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ವಿಶ್ವಾಸವನ್ನು ಬಲಪಡಿಸಲು, ಸುರಕ್ಷತೆಯನ್ನು ಸುಧಾರಿಸಲು ಮತ್ತು ಸಹಕಾರವನ್ನು ಬೆಳೆಸಲು ಗುರಿ ಹೊಂದಿದೆ. ಕರ್ನಾಟಕವು ಭಾರತದಲ್ಲಿ ಸಮುದಾಯ ಆಧಾರಿತ ಪೊಲೀಸ್ ವ್ಯವಸ್ಥೆಗೆ ಒಂದು ಮಾದರಿಯನ್ನು ಸ್ಥಾಪಿಸುತ್ತಿದೆ. ’ಮನೆ ಮನೆಗೆ ಪೊಲೀಸ್’ ಯೋಜನೆಯ ಯಶಸ್ಸು ಸಮರ್ಪಿತ ಅನುಷ್ಠಾನ, ಸಮುದಾಯದ ಬೆಂಬಲ ಮತ್ತು ಸುರಕ್ಷಿತ ಮತ್ತು ಹೆಚ್ಚು ಸಂಪರ್ಕಿತ ಸಮಾಜವನ್ನು ನಿರ್ಮಿಸಲು ನಿರಂತರ ಮೌಲ್ಯಮಾಪನವನ್ನು ಅವಲಂಬಿಸಿರುತ್ತದೆ.


ಯೋಜನೆಯಡಿ ಬೀಟ್ ಕಾನ್‌ಸ್ಟೆಬಲ್‌ಗಳು, ಇನ್‌ಸ್ಪೆಕ್ಟರ್‌ಗಳು ಹಾಗೂ ಪೊಲೀಸ್ ಸ್ವಯಂಸೇವಕರು ಸ್ಥಳೀಯ ಪ್ರದೇಶಗಳ ಮನೆಗಳಿಗೆ ನಿಯಮಿತವಾಗಿ ಭೇಟಿ ನೀಡಿ . ನಿವಾಸಿಗಳ ಸಮಸ್ಯೆಗಳು, ಸ್ಥಳೀಯ ಸುರಕ್ಷತಾ ವಿಚಾರಗಳು ಹಾಗೂ ಕಾನೂನು ಸಂಬಂಧಿತ ಅಗತ್ಯಗಳನ್ನು ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳತೊಡಗಿದ್ದಾರೆ.


ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪೊಲೀಸರು ಅಪರಾಧ ತಡೆಗಟ್ಟುವಿಕೆ, ಮಹಿಳೆಯರ ಸುರಕ್ಷತೆ, ಸೈಬರ್ ಅಪರಾಧಗಳು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ.

ನಾಗರಿಕರು ತಮ್ಮ ದೂರು, ಸಮಸ್ಯೆ ಹಾಗೂ ಸ್ಥಳೀಯವಾಗಿ ಕಂಡುಬರುವ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರೊಂದಿಗೆ ನೇರವಾಗಿ ಮಾಹಿತಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
ಯೋಜನೆ ವೈಶಿಷ್ಟ್ಯಗಳು

ಮನೆಗೆ ಪೊಲೀಸರ ಭೇಟಿ:

ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಳೀಯ ಪ್ರದೇಶದ ಪ್ರತಿ ಮನೆಗೂ ಭೇಟಿ ನೀಡಿ, ನಿವಾಸಿಗಳೊಂದಿಗೆ ಸೌಹಾರ್ದಯುತ ಸಂಬಂಧ ಬೆಳೆಸುತ್ತಾರೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಸುರಕ್ಷತೆ ಹಾಗೂ ಭದ್ರತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ.

ಅರಿವು ಅಭಿಯಾನ:

ಅಪರಾಧ ತಡೆಗಟ್ಟುವಿಕೆ, ಮಹಿಳೆಯರ ಸುರಕ್ಷತೆ ಮತ್ತು ಸೈಬರ್ ಭದ್ರತೆಯ ಬಗ್ಗೆ ಅಧಿಕಾರಿಗಳು ನಿವಾಸಿಗಳಿಗೆ ಮಾಹಿತಿ ನೀಡುತ್ತಾರೆ.
ನಾಗರಿಕರು ತಮ್ಮ ಪ್ರತಿಕ್ರಿಯೆಗಳು, ದೂರುಗಳು ಅಥವಾ ಮಾಹಿತಿಗಳನ್ನು ಭೇಟಿ ನೀಡುವ ಅಧಿಕಾರಿಗಳೊಂದಿಗೆ ನೇರವಾಗಿ ಹಂಚಿಕೊಳ್ಳಬಹುದು.
ನೆರೆಹೊರೆ ಕಾವಲು:
ಸ್ಥಳೀಯ ಪೊಲೀಸರು ನೆರೆಹೊರೆಯ ಕಾವಲು ಗುಂಪುಗಳನ್ನು ರಚಿಸಲು ಮತ್ತು ಸಾಮೂಹಿಕ ಕ್ರಮಗಳನ್ನು ಬಲಪಡಿಸಲು ಸಹಾಯ ಮಾಡುತ್ತಾರೆ.

*ಪೊಲೀಸ್ ಪಡೆ ಮತ್ತು ನಿವಾಸಿಗಳ ನಡುವೆ ನೇರ ಸಂವಹನವನ್ನು ಉತ್ತೇಜಿಸುವುದು.
*ಸ್ಥಳೀಯ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವಿಕೆಯಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು.
*ಪೊಲೀಸ್ ಸಿಬ್ಬಂದಿಯ ಪಾರದರ್ಶಕತೆ ಮತ್ತು ಸ್ಪಂದನಾಶೀಲತೆಯನ್ನು ಹೆಚ್ಚಿಸುವುದು.