Home ಜಿಲ್ಲೆ ಕಲಬುರಗಿ ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ: ನ್ಯಾಯಾಧೀಶೆ ಸುಮನ್ ಚಿತ್ತರಗಿ

ರಾಷ್ಟ್ರೀಯ ಲೋಕ ಅದಾಲತ್ ಯಶಸ್ವಿಗೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ: ನ್ಯಾಯಾಧೀಶೆ ಸುಮನ್ ಚಿತ್ತರಗಿ

ಆಳಂದ:ಜೂ.೧೪: ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಹಾಗೂ ಸಾರ್ವಜನಿಕರಿಗೆ ತ್ವರಿತ ನ್ಯಾಯ ದೊರಕಿಸುವ ಉದ್ದೇಶದಿಂದ ಜುಲೈ ೧೧ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್‌ನ್ನು ಯಶಸ್ವಿಯಾಗಿ ನಡೆಸಲು ಸಂಬAಧಿತ ಎಲ್ಲ ಇಲಾಖೆಗಳ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ನ್ಯಾಯವಾದಿಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಕುಮಾರಿ ಸುಮನ್ ಚಿತ್ತರಗಿ ಕರೆ ನೀಡಿದರು.
ಪಟ್ಟಣದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕ ಅದಾಲತ್ ಎಂಬುದು ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ, ತ್ವರಿತ ಹಾಗೂ ಸೌಹಾರ್ದಯುತ ನ್ಯಾಯ ದೊರಕಿಸುವ ಪರಿಣಾಮಕಾರಿ ವೇದಿಕೆಯಾಗಿದ್ದು, ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಪರಸ್ಪರ ಒಪ್ಪಂದದ ಮೂಲಕ ಇತ್ಯರ್ಥಪಡಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳಿಗೆ ಸಂಬAಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ವಿವಿಧ ಬಾಕಿ ಇರುವ ವ್ಯಾಜ್ಯಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಈ ಎಲ್ಲ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇತ್ಯರ್ಥಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬAಧಿತ ಅಧಿಕಾರಿಗಳು ಹಾಗೂ ನ್ಯಾಯವಾದಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದರು.
ಪ್ರಕರಣಗಳಲ್ಲಿನ ಪಕ್ಷಕಾರರಿಗೆ ಲೋಕ ಅದಾಲತ್‌ನ ಮಹತ್ವ ಹಾಗೂ ಪ್ರಯೋಜನಗಳ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ರಾಜಿ ಮೂಲಕ ಇತ್ಯರ್ಥವಾದ ಪ್ರಕರಣಗಳಲ್ಲಿ ಮೇಲ್ಮನವಿ ಅವಕಾಶ ಇರುವುದಿಲ್ಲ ಹಾಗೂ ನ್ಯಾಯಾಲಯ ಶುಲ್ಕ ಮರುಪಾವತಿಯಾಗುವಂತಹ ಹಲವು ಅನುಕೂಲಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ, ಕಮಲಾಪುರ ತಹಸೀಲ್ದಾರ ಮೋಸೀನ್ ಅಹ್ಮದ್, ಪಿಎಸ್‌ಐ ಸಂಜಯ ರೆಡ್ಡಿ, ಮಾದನಹಿಪ್ಪರಾ ಪಿಎಸ್‌ಐ ಮಹಾಂತೇಶ ಪಾಟೀಲ, ನಿಂಬರಗಾ ಪಿಎಸ್‌ಐ ಇಂದುಮತಿ, ನ್ಯಾಯವಾದಿ ಸಂಘದ ಕಾರ್ಯದರ್ಶಿ ಬಿ.ಟಿ. ಸಿಂಧೆ, ಸರ್ಕಾರಿ ವಕೀಲೆ ಜೋತಿ ವಿ. ಬಂದಿ, ಎಎಸ್‌ಐ ಶಿವಶರಣಪ್ಪ, ನರೋಣಾದ ಶಾಂತಪ್ಪ, ಎಸ್‌ಬಿಐ ವ್ಯವಸ್ಥಾಪಕ ಮನೋಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಿವಶರಣಪ್ಪ, ತಾಲೂಕು ಕಾನೂನು ಸೇವಾ ಸಮಿತಿಯ ಬಸವರಾಜ ಬಸ್ತೆ, ಶರಣು ಸೇರಿದಂತೆ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ ಸಿಬ್ಬಂದಿ, ನ್ಯಾಯವಾದಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.