
ತುಮಕೂರು, ಅ. ೨- ನೈಸ್ ಸಂಸ್ಥೆಯ ಅಶೋಕ್ ಖೇಣಿ ಸಿದ್ಧಗಂಗಾ ಮಠಕ್ಕೆ ಚಿನ್ನದ ಕರಡಿಗೆ ನೀಡಿದ್ದಾರೆ ಎಂಬ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಅದೆಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಎಂದು ಶ್ರೀಮಠ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು, ೨೦೦೧-೦೨ರಲ್ಲಿ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮಠಕ್ಕೆ ಆಗಮಿಸಿ ಡಾ. ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗಳವರನ್ನು ಭೇಟಿಯಾಗಿ ಬೆಂಗಳೂರು ಗ್ರಾಮಾಂತರದ ಸೋಂಪುರದಲ್ಲಿದ್ದ ಶ್ರೀಮಠಕ್ಕೆ ಸಂಬಂಧಿಸಿದ ೭ ಎಕರೆ ೩೯ ಗುಂಟೆ ಜಮೀನನ್ನು ನೈಸ್ ರಸ್ತೆ ನಿರ್ಮಾಣಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಜಮೀನಿನ ಬದಲಾಗಿ ಬೇರೆಡೆ ಸೈಟ್ ಹಾಗೂ ಮಠಕ್ಕೆ ನಿಶ್ಚಿತ ಆದಾಯ ಬರುವಂತೆ ಮಾಡಿಕೊಡುವುದಾಗಿ ಪತ್ರದ ಮುಖೇನ ಭರವಸೆ ನೀಡಿದ್ದರು ಎಂದು ಹೇಳಿದರು.
ಅಶೋಕ್ ಖೇಣಿಯವರು ಶ್ರೀ ಮಠಕ್ಕೆ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಈ ಬಗ್ಗೆ ಕಳೆದ ೮ ವರ್ಷಗಳಿಂದ ಅವರಿಗೆ ಪತ್ರ ಬರೆದರೂ ಯಾವುದೇ ಪ್ರತ್ಯುತ್ತರ ಬಂದಿಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.
ಅಂದು ನೈಸ್ ರಸ್ತೆಗಾಗಿ ಮಠದಿಂದ ಪಡೆದಿದ್ದ ೭ ಎಕರೆ ೩೯ ಗುಂಟೆ ಜಮೀನಿನಲ್ಲಿ ಸ್ವಲ್ಪ ಜಮೀನನ್ನು ಮಾತ್ರ ರಸ್ತೆಗೆ ಬಳಸಿಕೊಳ್ಳಲಾಗಿದ್ದು, ಉಳಿದ ೬ ಎಕರೆ ಜಮೀನು ಹಾಗೆಯೇ ಇದೆ. ಸ್ವಾಧೀನಪಡಿಸಿಕೊಂಡ ಜಮೀನನ್ನು ೨೫ ವರ್ಷಗಳಲ್ಲಿ ಬಳಸಿಕೊಳ್ಳದಿದ್ದರೆ ಅದನ್ನು ಮೂಲ ಮಾಲೀಕರಿಗೆ ವಾಪಸ್ ನೀಡಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶವಿದೆ. ಸದರಿ ಜಮೀನನ್ನು ಮಠಕ್ಕೆ ಹಿಂತಿರುಗಿಸಬೇಕು ಎಂದು ಶ್ರೀಗಳು ಸರ್ಕಾರ ಹಾಗೂ ನೈಸ್ ಸಂಸ್ಥೆಯನ್ನು ಆಗ್ರಹಿಸಿದರು.
ಮಠ ಹಾಗೂ ಜಮೀನು ನೀಡಿದ ಇತರ ರೈತರು ಸೇರಿ ಉಳಿಕೆ ಜಮೀನು ವಾಪಸ್ ಕೊಡುವಂತೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ ಎಂದ ಶ್ರೀಗಳು, ಅಶೋಕ್ ಖೇಣಿ ಅವರು ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಚಿನ್ನದ ಕರಡಿಗೆ ಕಾಣಿಕೆ ನೀಡಿದ್ದಾರೆ ಎಂಬ ವಿಚಾರವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದರು.
ಚಿನ್ನದ ಕರಡಿಗೆ ಕಾಣಿಕೆ ಸುಳ್ಳು, ಇದೆಲ್ಲವೂ ಪ್ರಚಾರಕ್ಕಾಗಿ ಆಡಿರುವ ಮಾತುಗಳು. ಅಶೋಕ್ ಖೇಣಿ ಅವರು ನೈಸ್ ರಸ್ತೆಗೆ ಜಮೀನು ಕೇಳುವ ಆ ಸಂದರ್ಭದಲ್ಲಿ ಬಂದಿದ್ದು ಬಿಟ್ಟರೆ ಮತ್ತೆಂದೂ ಮಠದ ಕಡೆ ಬಂದಿಲ್ಲ.
ಪೂಜ್ಯರು ಲಿಂಗೈಕ್ಯರಾದಾಗಲೂ ಅವರು ಬರಲಿಲ್ಲ. ಮಠದಲ್ಲಿ ಪ್ರತಿಯೊಂದು ವಸ್ತುವಿನ ದಾಖಲೆ ಇಡಲಾಗಿದ್ದು, ಖೇಣಿ ಕೊಟ್ಟ ಯಾವುದೇ ವಸ್ತು ನಮ್ಮ ಬಳಿ ಇಲ್ಲ. ಇಲ್ಲದ ವಿಚಾರಗಳನ್ನು ಮಾತನಾಡಿರುವುದು ತೀವ್ರ ನೋವುಂಟು ಮಾಡಿದೆ ಎಂದು ಅವರು ಅಸಮಾಧಾನ ಹೊರ ಹಾಕಿದರು.

























