
ಬೀದರ: ಪ್ರಕೃತಿಯೇ ನಮ್ಮ ಜೀವದಾತೆಯಾಗಿದ್ದು, ಅದರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಎಂಬ ಪಂಚ ಮಹಾಭೂತಗಳು ಸಕಲ ಜೀವರಾಶಿಗಳ ಉಗಮ, ವಿಕಾಸ ಹಾಗೂ ಅಸ್ತಿತ್ವಕ್ಕೆ ಕಾರಣವಾಗಿವೆ. ಆದ್ದರಿಂದ ಪಂಚ ಮಹಾಭೂತಗಳನ್ನು ಮಲಿನಗೊಳಿಸದೆ ಅವುಗಳ ಪಾವಿತ್ರ್ಯವನ್ನು ಕಾಪಾಡಬೇಕು. ಇದರಿಂದಲೇ ನಮ್ಮ ಆರೋಗ್ಯವೂ ಅಡಗಿದೆ ಎಂದು ತೋಟಗಾರಿಕೆ ಕಾಲೇಜು, ಬೀದರ ಡೀನ್ ಡಾ. ಎಸ್.ವಿ. ಪಾಟೀಲ ಹೇಳಿದರು.
ನಗರದ ವಿವೇಕಾನಂದ ಬಡಾವಣೆ (ಗುಂಪಾ)ಯಲ್ಲಿರುವ ಪಂಚಾಕ್ಷರ ನಿಲಯದಲ್ಲಿ ಕುಮಾರ ಕೃಪಾ ಕೋವಿಡ್ ಗೆದ್ದವರ ಕೈತೋಟ ವೇದಿಕೆ ವತಿಯಿಂದ ಪೆÇ್ರ. ಎಸ್.ವಿ. ಕಲ್ಮಠ ಅವರ 73ನೇ ವಾರ್ಷಿಕ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪ್ರಕೃತಿ ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನ್ಮದಿನದ ಅಂಗವಾಗಿ ಪ್ರಕೃತಿ ವಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಪೆÇ್ರ. ಎಸ್.ವಿ. ಕಲ್ಮಠ ಅವರು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಡಾ. ಪಾಟೀಲ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಮಾತನಾಡಿ, ಕಳೆದ ಹಲವು ದಶಕಗಳಿಂದ ಮಾನವ ಪ್ರಕೃತಿಯ ಮಹತ್ವವನ್ನು ಅರಿಯದೆ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡಿದ್ದಾನೆ. ಇದರ ಪರಿಣಾಮವಾಗಿ ಜಲಪ್ರಳಯ, ಅಗ್ನಿ ಅವಘಡ, ಪ್ರವಾಹ, ಭೂಕುಸಿತ ಹಾಗೂ ಬರಗಾಲದಂತಹ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಪ್ರಕೃತಿಯನ್ನು ಸಂರಕ್ಷಿಸದಿದ್ದರೆ ನಮ್ಮ ಅಂತ್ಯವನ್ನು ನಾವೇ ಆಹ್ವಾನಿಸಿಕೊಂಡಂತಾಗುತ್ತದೆ ಎಂದು ಎಚ್ಚರಿಸಿದರು.
ಚಂದ್ರಶೇಖರ ಹೆಬ್ಬಾಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶರಣಪ್ಪ ಮಲಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪೂಜಾ ಸೂರ್ಯವಂಶಿ ಸ್ವಾಗತಿಸಿದರು. ಧರ್ಮವೀರ ಬಿರಾದಾರ ವಂದಿಸಿದರು. ಶಿವಪುತ್ರ ಪಾಟೀಲ ನಿರೂಪಿಸಿದರು.
ಶಾಂಭವಿ ಕಲ್ಮಠ ಪ್ರಕೃತಿ ಗೀತೆ ಹಾಡಿದರು. ವಂದೇ ರೇಣುಕಂ ಭಜನಾ ಮಂಡಳಿಯವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಶೋಭಾವತಿ ಮಂಗಳೂರೆ ಅವರು ಪೆÇ್ರ. ಎಸ್.ವಿ. ಕಲ್ಮಠ ಅವರ ಕುರಿತು ಕವನ ವಾಚಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಪೆÇ್ರ. ಎಸ್.ವಿ. ಕಲ್ಮಠ ಅವರು ಸಸಿ ನೆಡುವ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಂಡರು. ರಾಜೇಶ್ವರಿ ಕಲ್ಮಠ ಅವರು ಪಂಚ ಮಹಾಭೂತಗಳಿಗೆ ಪೂಜೆ ಸಲ್ಲಿಸಿದರು. ನಿವೃತ್ತ ಸಂಗೀತ ಶಿಕ್ಷಕ ಸಂಗಯ್ಯ ಹಿರೇಮಠ ಅವರನ್ನು ಕಲ್ಮಠ ಪರಿವಾರದವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಕುಮಾರ ಸಜ್ಜನ, ಶೈಲೇಂದ್ರ ಕಾವಡಿ, ಸುರೇಶ ಚಿಟಗೊಪಕರ್, ವಿಜಯಕುಮಾರ ಬೊಗಲೆ, ದಿಲೀಪ ಹುಲಸುರೆ, ರೇವಣಪ್ಪ ಮೂಲಗೆ, ವೀರಭದ್ರಪ್ಪ ಉಪ್ಪಿನ, ಆನಂದ ಮಾಳಗೆ ಸೇರಿದಂತೆ ಬಂಧು-ಬಳಗದವರು, ಬಡಾವಣೆ ನಿವಾಸಿಗಳು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.































