Home ಮುಖಪುಟ ಸುದ್ದಿ ೧೪ ಕೋಟಿ ವೆಚ್ಚದ ಪಾಲಿಕೆ ಬಜಾರ್ ಖಾಲಿ: ಸಾರ್ವಜನಿಕ ನಿಧಿ ದುರ್ಬಳಕೆಗೆ ಆಕ್ರೋಶ

೧೪ ಕೋಟಿ ವೆಚ್ಚದ ಪಾಲಿಕೆ ಬಜಾರ್ ಖಾಲಿ: ಸಾರ್ವಜನಿಕ ನಿಧಿ ದುರ್ಬಳಕೆಗೆ ಆಕ್ರೋಶ

ಬೆಂಗಳೂರು:ಜೂ.೯-ವಿಜಯನಗರ ಮುಖ್ಯರಸ್ತೆಯ ಸರ್ವಿಸ್ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗಾಗಿ ಸುಮಾರು ೧೪ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ೭೯ ಮಳಿಗೆಗಳ ಅತ್ಯಾಧುನಿಕ ಭೂಗತ “ಪಾಲಿಕೆ ಬಜಾರ್” ಇದೀಗ ಬಳಕೆಯಾಗದೇ ಖಾಲಿ ಬಿದ್ದಿದ್ದು, ಸಾರ್ವಜನಿಕ ನಿಧಿಯ ದುರುಪಯೋಗದ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ಥಳೀಯ ಬೀದಿ ವ್ಯಾಪಾರಿಗಳನ್ನು ಪಾದಚಾರಿ ಮಾರ್ಗಗಳಿಂದ ತೆರವುಗೊಳಿಸಿ, ವ್ಯವಸ್ಥಿತವಾಗಿ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಮಾರುಕಟ್ಟೆಯಲ್ಲಿ ಅಧಿಕೃತ ಉದ್ಘಾಟನೆಯಾದ ಬಳಿಕವೂ ಕೇವಲ ಐದಾರು ವ್ಯಾಪಾರಿಗಳು ಮಾತ್ರ ಮಳಿಗೆಗಳನ್ನು ಸ್ವೀಕರಿಸಿದ್ದಾರೆ. ಉಳಿದ ಸುಮಾರು ೭೫ ಮಳಿಗೆಗಳು ಬೀಗ ಹಾಕಿದ ಸ್ಥಿತಿಯಲ್ಲೇ ಖಾಲಿ ಉಳಿದಿವೆ.


೨೦೧೭ರ ರಿಟ್ ಅರ್ಜಿ ಸಂಖ್ಯೆ ೩೫೩೪೨ ಪ್ರಕರಣದಲ್ಲಿ ಅಂದಿನ ಬಿಬಿಎಂಪಿ ಆಯುಕ್ತರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, ಪಾಲಿಕೆ ಬಜಾರ್ ಪೂರ್ಣಗೊಂಡ ತಕ್ಷಣ ವಿಜಯನಗರ ಸರ್ವಿಸ್ ರಸ್ತೆಯ ಪಾದಚಾರಿ ಮಾರ್ಗಗಳಲ್ಲಿನ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಹಲವು ವರ್ಷಗಳಾದರೂ ಆ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.


ಪಾದಚಾರಿಗಳಿಗೆ ಸಂಕಷ್ಟ


ಪ್ರಸ್ತುತ ಸರ್ವಿಸ್ ರಸ್ತೆಯ ಎರಡೂ ಬದಿಗಳಲ್ಲೂ ಬೀದಿ ವ್ಯಾಪಾರಿಗಳು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವುದರಿಂದ ಸಾರ್ವಜನಿಕರಿಗೆ ನಡೆದು ಸಂಚರಿಸುವುದೇ ಕಷ್ಟಕರವಾಗಿದೆ. ವಾಹನಗಳ ಅಕ್ರಮ ನಿಲುಗಡೆ, ರಸ್ತೆ ಬದಿಯ ವ್ಯಾಪಾರ ಚಟುವಟಿಕೆ ಹಾಗೂ ಸಂಚಾರ ದಟ್ಟಣೆಯಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.


ಇದೇ ವೇಳೆ ಸಾರ್ವಜನಿಕ ಹಣದಲ್ಲಿ ನಿರ್ಮಿಸಲಾದ ಪಾದಚಾರಿ ಸುರಂಗವೂ ನಿರುಪಯುಕ್ತವಾಗಿದ್ದು, ಅದರ ಬಳಕೆ ಇಲ್ಲದಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬೀದಿ ವ್ಯಾಪಾರಿಗಳನ್ನು ಪಾಲಿಕೆ ಬಜಾರ್‌ಗೆ ಸ್ಥಳಾಂತರಿಸಲು ಅಥವಾ ಒತ್ತುವರಿಗಳನ್ನು ತೆರವುಗೊಳಿಸಲು ಪಾಲಿಕೆ ಹಾಗೂ ಜಾರಿ ವಿಭಾಗಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಈ ನಿರ್ಲಕ್ಷ್ಯದಿಂದ ಕೋಟ್ಯಂತರ ರೂಪಾಯಿ ವೆಚ್ಚದ ಸಾರ್ವಜನಿಕ ಆಸ್ತಿ ಬಳಕೆಯಾಗದೆ ಉಳಿದಿದೆ ಎಂದು ನಾಗರಿಕರು ದೂರಿದ್ದಾರೆ.

ನಾಗರಿಕರ ಆಗ್ರಹ:
ವಿಜಯನಗರ ಸರ್ವಿಸ್ ರಸ್ತೆಯ ಪಾದಚಾರಿ ಮಾರ್ಗಗಳನ್ನು ತಕ್ಷಣ ಒತ್ತುವರಿ ಮುಕ್ತಗೊಳಿಸಬೇಕು. ಪಾಲಿಕೆ ಬಜಾರ್‌ನಲ್ಲಿನ ಮಳಿಗೆಗಳಿಗೆ ವ್ಯಾಪಾರಿಗಳನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಖಾಲಿ ಮಳಿಗೆಗಳನ್ನು ಪಾರದರ್ಶಕ ಇ-ಹರಾಜು ಮೂಲಕ ಹಂಚಿಕೆ ಮಾಡಿ ಸಾರ್ವಜನಿಕ ಆಸ್ತಿಯ ಸದ್ಬಳಕೆ ಖಚಿತಪಡಿಸಬೇಕು ಎಂದು ಸ್ಥಳೀಯರು ಸರ್ಕಾರ ಹಾಗೂ ಪಾಲಿಕೆಗೆ ಮನವಿ ಮಾಡಿದ್ದಾರೆ.
ದೂರು ನೀಡಿದ ಕೆಲ ನಾಗರಿಕರಿಗೆ ಬೆದರಿಕೆಗಳು ಬರುತ್ತಿವೆ ಎಂಬ ಆರೋಪವೂ ಕೂಡ ಸ್ಥಳೀಯರಿಂದ ಕೇಳಿಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಒತ್ತಾಯಿಸಿದರೆ.