Home ಜಿಲ್ಲೆ ಬೆಂಗಳೂರು ಪತ್ರಕರ್ತರ ಹಿತ ಕಾಪಾಡುವ ಸಹಕಾರ ಸಂಘದ ಬಗ್ಗೆ ಕುಚೇಷ್ಟೇ ಸಲ್ಲ

ಪತ್ರಕರ್ತರ ಹಿತ ಕಾಪಾಡುವ ಸಹಕಾರ ಸಂಘದ ಬಗ್ಗೆ ಕುಚೇಷ್ಟೇ ಸಲ್ಲ

ಕೋಲಾರ,ಆ,೧೨- ಕೋಲಾರ, ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಪತ್ರಕರ್ತರ ಹಿತಾಸಕ್ತಿ ಕಾಪಾಡಲು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಇಂತಹ ಸಂಘದ ಧ್ಯೇಯೋದ್ಧೇಶಕ್ಕೆ ಧಕ್ಕೆ ತರಲು ಕುಚೇಷ್ಟೇ, ಕುಚೋದ್ಯ ನಡೆಸುವುದು ತರವಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ ತಿಳಿಸಿದರು.


ಅವಿಭಜಿತ ಕೋಲಾರ ಜಿಲ್ಲೆಯ ಶ್ರೀಕ್ಷೇತ್ರ ಕೈವಾರದ ಯೋಗಿನಾರೇಯಣ ಮಠದ ಸಭಾಂಗಣದಲ್ಲಿ ಮಂಗಳವಾರ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೫-೨೬ ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.


ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚಿನ ಸದಸ್ಯತ್ವ ನೀಡಲು ಮನವಿ ಮಾಡಿದ ಅವರು,ಸಹಕಾರ ತತ್ವಗಳಡಿ ಸದಸ್ಯರ ಹಿತಾಸಕ್ತಿ ಕಾಪಾಡುವ ಕೆಲಸ ನಡೆಯುತ್ತಿರುವಾಗ ಅಪಪ್ರಚಾರ ಮಾಡುವುದು ತಿಳುವಳಿಕೆಯಿಲ್ಲದವರ ಕೆಲಸವಾಗಿದೆ, ಇದನ್ನು ಮೆಟ್ಟಿ ನಿಂತು ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸೋಣ ಎಂದರು.


ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ೧೯ನೇ ವರ್ಷದ ಮಹಾಸಭೆ ಇದಾಗಿದ್ದು, ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿರುವ ಕುರಿತು ಹರ್ಷವ್ಯಕ್ತಪಡಿಸಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕಾರ್ಯನಿರತ ಪತ್ರಕರ್ತರ ವಿವಿದ್ದೋದ್ಧೇಶ ಸಹಕಾರ ಸಂಘವು ೨೦೨೫-೨೬ ಸಾಲಿನಲ್ಲಿ ೮೯೨೬೯ ರೂ ನಿವ್ವಳ ಲಾಭದೊಂದಿಗೆ ಆಡಿಟ್ ವರದಿಯಲ್ಲಿ ಬಿ ಶ್ರೇಣಿ ದಕ್ಕಿಸಿಕೊಂಡಿದೆಯೆಂದು ತಿಳಿಸಿದರು.


ಸದಸ್ಯತ್ವ ಅಭಿಯಾನಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು, ಕೋಲಾರ ಜಿಲ್ಲೆಯಿಂದ ೨೦೦ಕ್ಕೂ ಹೆಚ್ಚು ಅರ್ಜಿಗಳು, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ೬೦ಕ್ಕೂ ಹೆಚ್ಚು ಅರ್ಜಿಗಳು ಸದಸ್ಯತ್ವ ನೋಂದಣಿಗೆ ಬಂದಿವೆ ಆದರೆ ಈ ಬಾರಿ ಆದ್ಯತೆಯ ಮೇರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಪತ್ರಕರ್ತರ ಷೇರು ನೋಂದಣಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿ ಸಭೆಯ ಅನುಮೋದನೆ ಪಡೆದರು.