
ಅಜ್ಜಂಪುರ, ಆ. ೧೫- ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರು ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಜಿ.ಹೆಚ್. ಶ್ರೀನಿವಾಸ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನಪರ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲಾಗುತ್ತಿದ್ದು, ಶಿವನಿ ಹೋಬಳಿಯ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ತಮ್ಮನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಶಿವನಿ ಗ್ರಾಮವನ್ನು ದಾಖಲೆ ಗ್ರಾಮವಾಗಿ ಹಾಗೂ ಉಪಗ್ರಾಮವಾಗಿ ಪರಿಗಣಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಇದರಿಂದ ಗ್ರಾಮಸ್ಥರಿಗೆ ಸರ್ಕಾರದ ವಿವಿಧ ದಾಖಲೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಶಿವನಿ ಆರ್.ಎಸ್. ಗ್ರಾಮದಲ್ಲಿ ಸರ್ಕಾರದಿಂದ ಸುಮಾರು ರೂ. ೧ ಕೋಟಿ ಅನುದಾನವನ್ನು ವ್ಯಯಿಸಲಾಗಿದೆ ಎಂದು ಹೇಳಿದರು.
ಶಿವನಿ ಆರ್.ಎಸ್. ಗ್ರಾಮ ಇದೀಗ ಉಪಗ್ರಾಮವಾಗಿರುವುದರಿಂದ ಇಲ್ಲಿನ ಪ್ರತಿಯೊಬ್ಬ ಗ್ರಾಮಸ್ಥರಿಗೂ ಸರ್ಕಾರದ ದಾಖಲೆಗಳನ್ನು ಮಾಡಿಸಿಕೊಳ್ಳಲು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆಯಲು ಗ್ರಾಮಸ್ಥರಿಗೆ ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.
ಈ ಹಿನ್ನೆಲೆಯಲ್ಲಿ ತರೀಕೆರೆ ಉಪವಿಭಾಗಾಧಿಕಾರಿಗಳು ಖುದ್ದಾಗಿ ಶಿವನಿ ಆರ್.ಎಸ್. ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಗೆ ಅಗತ್ಯವಿರುವ ದಾಖಲೆಗಳನ್ನು ಒದಗಿಸುವ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಸ್ಥಳೀಯರು ಶಾಸಕ ಜಿ.ಹೆಚ್. ಶ್ರೀನಿವಾಸ್ ಅವರನ್ನು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಜಿ.ಹೆಚ್. ಶ್ರೀನಿವಾಸ್ ಜನಹಿತ ಟ್ರಸ್ಟ್ (ರಿ.) ಹಾಗೂ ಸೃಷ್ಟಿ ಎಂಟರ್‌ಪ್ರೈಸಸ್, ಅಜ್ಜಂಪುರ ಇವರ ವತಿಯಿಂದ ‘ಸಿರಿ ಜೀವ ಜಲ’ ಕುಡಿಯುವ ನೀರಿನ ಘಟಕಗಳ ದುರಸ್ತಿ ಉಪಕರಣಗಳ ವಾಹನವನ್ನು ಅಜ್ಜಂಪುರ ತಾಲೂಕು ಪಂಚಾಯಿತಿ ಆವರಣದಲ್ಲಿ ಉದ್ಘಾಟಿಸಲಾಯಿತು.
ದಾಸರಹಟ್ಟಿಯಿಂದ ಶಿವನಿ ಆರ್.ಎಸ್. ಮೂಲಕ ಅನುವನಹಳ್ಳಿ ಸಂಪರ್ಕಿಸುವ ರೂ. ೧ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಅಲ್ಲದೆ ಬಂಡ್ರೆ, ಬೀರನಹಳ್ಳಿ ಹಾಗೂ ಗಡಿಗಿರಿಯಾಪುರ ಗ್ರಾಮಗಳಲ್ಲಿ ತಲಾ ರೂ. ೧೦ ಲಕ್ಷ ಅನುದಾನದಲ್ಲಿ ಕೈಗೊಳ್ಳಲಿರುವ ಸಿ.ಸಿ. ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಇಒ ವಿಜಯಕುಮಾರ್, ಪಿಡಬ್ಲ್ಯುಡಿ ಎಇಇ ಸೋಮಶೇಖರ್, ಲ್ಯಾಂಡ್ ಆರ್ಮಿ ಎಂಜಿನಿಯರ್ ಪುನೀತ್, ಬಗರ್ ಹುಕುಂ ಸಮಿತಿ ಸದಸ್ಯ ಬಿ.ಎಂ. ಗುರುಮೂರ್ತಿ, ಅಜ್ಜಂಪುರ ಪಟ್ಟಣ ಪಂಚಾಯಿತಿ ಸದಸ್ಯರಾದ ಆರ್. ಅಣ್ಣಪ್ಪ, ತೀರ್ಥಪ್ರಸಾದ್, ಜೋಗಿ ಪ್ರಕಾಶ್, ರಿಯಾಜ್, ಮುಖಂಡರಾದ ಷಡಾಕ್ಷರಿ, ನವೀನ್ ಕೊನೆಮನೆ, ಕಲ್ಲಪ್ಪ, ತಡಗನಿಂಗಪ್ಪ, ಗಿರೀಶ್, ಕಲ್ಲೇಶ್, ನಿರಂಜನ್, ಗುತ್ತಿಗೆದಾರ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
































