
ಮಧುಗಿರಿ, ಅ. ೨- ನ್ಯಾಯ ಕೇವಲ ಮಾತಿನಲ್ಲಿ ಉಳಿಯಬಾರದು. ಅದು ಸಂತ್ರಸ್ತ ಕುಟುಂಬದ ಬದುಕಿನಲ್ಲಿ ಭರವಸೆಯಾಗಿ ಕಾಣಿಸಿಕೊಳ್ಳಬೇಕು ಎಂಬ ನಿಲುವಿನೊಂದಿಗೆ ಕೆಲಸ ಮಾಡುವುದು ನನ್ನ ಪ್ರಮುಖ ಕರ್ತವ್ಯ ಎಂದು ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಕಸಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಯುವಕ ಸಿಂಹಾದ್ರಿ ಅವರ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮುಖಂಡರೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಯಾವುದೇ ಒತ್ತಡ, ಪ್ರಭಾವ ಅಥವಾ ಪಕ್ಷಪಾತಕ್ಕೆ ಅವಕಾಶ ನೀಡದೆ, ನಿಸ್ಪಕ್ಷಪಾತ ತನಿಖೆ ನಡೆಸಿ, ಪ್ರಕರಣದ ಸತ್ಯಾಂಶವನ್ನು ಸಂಪೂರ್ಣವಾಗಿ ಹೊರತಂದು ಅಪರಾಧಿಗಳಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸುವುದು ನನ್ನ ಪ್ರಮುಖ ಆದ್ಯತೆ ಎಂದರು.
ಸಿಂಹಾದ್ರಿ ಅವರ ತಾಯಿ ಅನ್ನಪೂರ್ಣ ಅವರಿಗೆ ಜೀವನ ನಡೆಸಲು ಕಸಪುರ ವಿ.ಎಸ್.ಎಸ್.ಎನ್ನಲ್ಲಿ ಉದ್ಯೋಗ ಕಲ್ಪಿಸಿದ್ದೇನೆ. ಮುಂದೆ ಡಿಸಿಸಿ ಬ್ಯಾಂಕ್ ಅಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.
ಕಸಾಪುರದ ಜನತೆ ಸ್ವಯಂ ಉದ್ಯೋಗ ಮಾಡಲು ಇಚ್ಚಿಸಿದಲ್ಲಿ ಕುರಿ ಮತ್ತು ಹಸು ಸಾಕುವುದಾದರೆ ಕುರಿ ಮತ್ತು ಹಸುಗಳನ್ನು ಕೊಡಿಸುವ ಭರವಸೆ ನೀಡಿದ ಅವರು, ಮೃತರ ಕುಟುಂಬಕ್ಕೆ ಪಂಚಾಯಿತಿ ಕಡೆಯಿಂದ ನಿವೇಶನ ಮಂಜೂರು ಮಾಡಿಸಿ ಮನೆ ಕಟ್ಟಿಸಿಕೊಡಲು ಅಧಿಕಾರಿಗಳಿಗೆ ಸೂಚಿಸಿ, ನನ್ನ ಕೈಲಾದ ಆರ್ಥಿಕ ಸಹಾಯವನ್ನು ಮಾಡಲಾಗಿದೆ. ಅಲ್ಲದೆ, ಕಸಾಪುರ ಗ್ರಾಮದ ದಲಿತ ಕುಟುಂಬಗಳ ಜೀವನೋಪಾಯವನ್ನು ಸುಧಾರಿಸುವ ಉದ್ದೇಶದಿಂದ ಆಸಕ್ತಿ ಹೊಂದಿರುವ ಕುಟುಂಬಗಳಿಗೆ ಗೃಹ ಕೈಗಾರಿಕೆ ಆರಂಭಿಸಲು ಆರ್ಥಿಕ ನೆರವು, ಕುರಿ ಹಾಗೂ ಹಸು ಸಾಕಾಣಿಕೆಗೆ ಅಗತ್ಯ ಸಹಾಯ ಹಾಗೂ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳಡಿ ಮನೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು. ಯಾರ್ಯಾರೋ ಬೆಂಗಳೂರಿಂದ ಬರುವವರ ಮಾತುಗಳನ್ನು ಕೇಳಬೇಡಿ. ತಮ್ಮಲ್ಲಿ ವಿಶ್ವಾಸವಿಡಿ ಇಲ್ಲಿಯವರೆಗೆ ದಲಿತರು ಸೇರಿದಂತೆ ಎಲ್ಲ ಜಾತಿಯ ಬಡವರು, ಅಸಹಾಯಕರು ಮತ್ತು ಶೋಷಿತ ವರ್ಗಗಳ ಕುಟುಂಬಗಳಿಗೆ ಧ್ವನಿಯಾಗಿ, ನನ್ನ ಕೈಲಾದ ಸಹಾಯ ಮಾಡಿಕೊಂಡು ಬಂದಿರುತ್ತೇನೆ. ಎಲ್ಲ ಜಾತಿಯಲ್ಲಿರುವ ಬಡವರು ಸೇರಿದಂತೆ, ದುರ್ಬಲರು, ಶೋಷಿತ ವರ್ಗಗಳಿಗೆ ಯಾವುದೇ ಪಕ್ಷ ಭೇದವಿಲ್ಲದೆ ಸಹಾಯ ಮಾಡುವುದು ನನ್ನ ಆಧ್ಯ ಕರ್ತವ್ಯವಾಗಿದೆ. ಈ ನಿರಂತರ ಕೆಲಸವನ್ನು ಮುಂದೆಯೂ ಸಹ ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಧಾರ ಮಹಾ ಸಭಾದ ಅಧ್ಯಕ್ಷ ಗೋಪಾಲಯ್ಯ ಮೃತ ದಲಿತ ಕುಟುಂಬಕ್ಕೆ ಅಗತ್ಯ ನೆರವು ಸಹಕಾರ ನೀಡಿದ ನಿವೇಶನ ಮತ್ತು ಮನೆ ಮಂಜೂರು ಮಾಡಿಸಿದ ಮಾಜಿ ಸಚಿವರು ಹಾಗೂ ಶಾಸಕ ಕೆ. ಎನ್. ರಾಜಣ್ಣ ರವರನ್ನು ಮಾದರ ಮಹಾಸಭಾ ಪರವಾಗಿ ಹಾಗೂ ತಾಲ್ಲೂಕಿನ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ಮಾದರ ಮಹಾಸಭಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಕುಮಾರ್, ಡಿವೈಎಸ್ಪಿ ಮಂಜುನಾಥ್, ನಿವೃತ್ತ ಪ್ರಾಂಶುಪಾಲ ಮುನೇಂದ್ರ ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಜಯರಾಮಯ್ಯ, ಮುಖಂಡ ತುಂಗೋಟಿ ರಾಮಣ್ಣ ಮತ್ತಿತರರು ಭಾಗವಹಿಸಿದ್ದರು.

























