
ಕಲಬುರಗಿ:ಮೇ.20: 2024-25ನೇ ಸಾಲಿನ ಅತಿವೃಷ್ಟಿ ಹಾಗೂ ನೆರೆಹಾವಳಿ ಅನುದಾನದಡಿ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಅಷ್ಠಗಾ ಗ್ರಾಮದಿಂದ ಸೈಯದ ಚಿಂಚೋಳಿ ಹಾಗೂ ನರೋಣಾ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸುಮಾರು ರೂ.4.50 ಕೋಟಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿತು. ಜೊತೆಗೆ ಸುಮಾರು ರೂ.1 ಕೋಟಿ ಅನುದಾನದಲ್ಲಿ ಸೇತುವೆ ನಿರ್ಮಾಣ ಹಾಗೂ ರೂ.50 ಲಕ್ಷ ವೆಚ್ಚದಲ್ಲಿ ಹನುಮಾನ್, ಹಿರೋಡೇಶ್ವರ ಮತ್ತು ಸಿದ್ದಾರೂಢ ದೇವಸ್ಥಾನಗಳ ಜೀರ್ಣೋದ್ಧಾರ ಕಾಮಗಾರಿಗಳಿಗೂ ಚಾಲನೆ ನೀಡಲಾಯಿತು.
ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಬಿ. ಮತ್ತಿಮಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ ಜನರಿಗೆ ಇದೀಗ ಉತ್ತಮ ಗುಣಮಟ್ಟದ ರಸ್ತೆ ಸೌಲಭ್ಯ ದೊರೆಯಲಿದೆ ಎಂದರು. ಈ ರಸ್ತೆ ಅಭಿವೃದ್ಧಿಯಿಂದ ರೈತರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಗ್ರಾಮೀಣ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲವಾಗಲಿದೆ ಎಂದು ಹೇಳಿದರು.
ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಈ ಯೋಜನೆಯಡಿ ಅಷ್ಠಗಾ, ಸೈಯದ ಚಿಂಚೋಳಿ ಹಾಗೂ ನರೋಣಾ ಭಾಗಗಳ ವ್ಯಾಪಾರ, ಸಂಚಾರ ಮತ್ತು ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ್ ಬೋಧನ್, ಶರಣಬಸಪ್ಪ ಬಿ. ಪಾಟೀಲ್ ಅಷ್ಠಗಾ, ಶಿವಕುಮಾರ್ ಪಾಟೀಲ್ ಜಂಬಗಾ, ಶಿವಪುತ್ರಪ್ಪ ಹತಗುಂದಿ, ಹೇಮಂತರಾವ್ ರೇವಣಿ ಕಲ್‍ಹಂಗರಗ, ಗಿರಿರಾಜ್ ಬಿರಾದಾರ್, ಶರಣಬಸಪ್ಪ ಪಾಟೀಲ್, ಶರಣಬಸಪ್ಪ ಬಿರಾದಾರ್, ದೀಪಕ್ ಸಲಗರ್, ಗೋಪಾಲರಾವ್ ಶಾಸ್ತ್ರಿ, ದೇವಿಂದ್ರಪ್ಪ ಪಾಟೀಲ್, ಅರುಣಕುಮಾರ್ ಬೆನಕನಹಳ್ಳಿ, ಅಶೋಕ್ ಬಿರಾದಾರ್, ಮಹದೇವ ಶಿವಕೇರಿ ಸೇರಿದಂತೆ ಕ್ಷೇತ್ರದ ಮುಖಂಡರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.





















