Home ಜಿಲ್ಲೆ ನೌಬಾದ್‍ನಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಒತ್ತಾಯ

ನೌಬಾದ್‍ನಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಸ್ಥಳಾಂತರಕ್ಕೆ ಒತ್ತಾಯ

ಬೀದರ್: ಮೇ.20: ಬೀದರ್ ನಗರದ ನೌಬಾದ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಅನ್ನು ಜನಸಾಮಾನ್ಯರಿಗೆ ಅನುಕೂಲವಾಗುವ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಕಲ್ಯಾಣ ಕರ್ನಾಟಕ ನವ ನಿರ್ಮಾಣ ಸೇನೆಯ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳು, ಬೀದರ್ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಮುಖಂಡರು, ನೌಬಾದ್ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಮಧ್ಯಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಸದರಿ ಸ್ಥಳವು ಸಾರ್ವಜನಿಕರು ಸುಲಭವಾಗಿ ಸೇರುವಂತಿಲ್ಲ. ಅಲ್ಲದೆ ಮಧ್ಯದಲ್ಲಿ ಡಿವೈಡರ್ ಇರುವುದರಿಂದ ಜನರು ಕ್ಯಾಂಟೀನ್‍ಗೆ ಬರಲು ಹಾಗೂ ಹೋಗಲು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ ನೌಬಾದ್-ಹುಮನಾಬಾದ್ ಮುಖ್ಯರಸ್ತೆಯ ಸರ್ಕಾರಿ ಶಾಲೆಯ ಆವರಣದ ಮೂಲೆಯಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ. ಬಡವರು, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸುವ ಜನಪ್ರಿಯ ಯೋಜನೆ ಜನರಿಗೆ ಸುಲಭವಾಗಿ ತಲುಪುವಂತಾಗಬೇಕು ಹೊರತು ಜನರು ಬಾರದ ಸ್ಥಳದಲ್ಲಿ ನಿರ್ಮಿಸಿ ಯೋಜನೆಗೆ ಕಪ್ಪುಚುಕ್ಕೆ ತರುವಂತಾಗಬಾರದು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್, ಪ್ರಧಾನ ಕಾರ್ಯದರ್ಶಿ ಎಂ.ಡಿ. ಮಸ್ತಾನಮುಲ್ಲಾ, ಸಂಸ್ಥಾಪಕ ಉಪಾಧ್ಯಕ್ಷ ಸಂಗಮೇಶ ಏಣಕೂರ್. ಜಿಲ್ಲಾಧ್ಯಕ್ಷ ಜೇಮ್ಸ್ ಇಸ್ಲಾಂಪೂರ, ಸುರೇಶ ಎನ್. ದೊಡ್ಡಿ, ಕಮಲಹಾಸನ ಭಾವಿದೊಡ್ಡಿ, ಶ್ರೀನಾಥ ದರ್ಗಾ, ಹಾಗೂ ತುಕಾರಾಮ ರಾಗಾಪೂರೆ ಉಪಸ್ಥಿತರಿದ್ದರು.