Home ಜಿಲ್ಲೆ ಕಲಬುರಗಿ ಮಳೆ ಕೊರತೆ, ಬೆಳೆ ಹಾನಿ ಪರಿಶೀಲಿಸಿದ ಸಚಿವ; ವಾಸ್ತವಾಂಶ ಆಧರಿಸಿ ಬರ ಘೋಷಣೆ ಕುರಿತು ನಿರ್ಧಾರ

ಮಳೆ ಕೊರತೆ, ಬೆಳೆ ಹಾನಿ ಪರಿಶೀಲಿಸಿದ ಸಚಿವ; ವಾಸ್ತವಾಂಶ ಆಧರಿಸಿ ಬರ ಘೋಷಣೆ ಕುರಿತು ನಿರ್ಧಾರ

ಜೇವರ್ಗಿ-ಯಡ್ರಾಮಿಯಲ್ಲಿ ಸಚಿವರಿಂದ ಬರಗಾಲ ವೀಕ್ಷಣೆ, ರೈತರ ಹಿತವೇ ಸರ್ಕಾರದ ಆದ್ಯತೆ: ಅಜಯ್ ಸಿಂಗ್
ಕಲಬುರಗಿ/ ಜೇವರ್ಗಿ,ಆ.೩೦-ಬರಗಾಲ ಪೀಡಿತ ಜಿಲ್ಲೆಗಳ ಪಟ್ಟಿಗೆ ಕಲಬುರಗಿ ಸೇರ್ಪಡೆಗಾಗಿ ಅದಾಗಲೇ ಸಿಎಂ ಡಿಕೆ ಶಿವಕುಮಾರ್, ಡಿಸಿಎಂ ಡಾ. ಪರಮೇಶ್ವರ ಅವರನ್ನು ಕಂಡು ಗಮನ ಸೆಳೆದಿರುವೆ. ಮಳೆ ಕೊರತೆ, ಬೆಳೆಹಾನಿ, ಒಣಹವೆ ಇತ್ಯಾದಿ ವಾಸ್ತವಾಂಶ ಆಧರಿಸಿ ಶೀಘ್ರ ನಿರ್ಧಾರ ಹೊರಬೀಳಲಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲಬುರಗಿ ಸಂಚಾರದಲ್ಲಿರುವ ಸಚಿವರು ಶನಿವಾರ ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ ಸಂಚರಿಸಿ ರೈತರ ಹೊಲಗದ್ದೆಯಲ್ಲಿ ಸುತ್ತಾಡಿ ರೈತರೊಂದಿಗೆ ಮಾತುಕತೆ ನಡೆಸಿ ಬೆಳೆಹಾನಿ, ಕೃಷಿ ವಲಯದ ವಾಸ್ತವ ಚಿತ್ರಣ ಪಡೆದುಕೊಂಡರು.
ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವುದು ಕೇವಲ ಮಳೆ ಕೊರತೆಯೊಂದೇ ಅಂಶವನ್ನು ಆಧರಿಸಿ ಕೈಗೊಳ್ಳುವ ನಿರ್ಧಾರವಲ್ಲ. ಲಭ್ಯವಿರುವ ಅಧಿಕೃತ ಅಂಕಿ-ಅAಶಗಳು ಹಾಗೂ ಕ್ಷೇತ್ರಮಟ್ಟದ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸಚಿವ ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದರು.
ಬರ ಘೋಷಣೆ ಕುರಿತು ಶಾಸಕರು ಈಗಾಗಲೇ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ವರದಿ ಸಲ್ಲಿಸಿದ್ದಾರೆ. ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದರು.
ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಬರ ಪೀಡಿತ ಎಂದು ಅಧಿಕೃತವಾಗಿ ಘೋಷಿಸಿರುವ ೧೦೧ ತಾಲೂಕು ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯ ಒಂದೂ ತಾಲೂಕು ಸ್ಥಾನ ಪಡೆಯದಿರುವುದರಿಂದ ಜಿಲ್ಲೆಯಾದ್ಯಂತ ರೈತ ಸಮೂಹದಲ್ಲಿ ಕಂಡಿರುವ ಅಸಮಾಧಾನ ತಮ್ಮ ಗಮನಕ್ಕೂ ಬಂದಿದೆ. ರೈತರು ಆತಂಕ ಪಡೋ ಕಾರಣವಿಲ್ಲ. ಸರ್ಕಾರ ರೈತರ ಪರವಾಗಿದೆ ಎಂದು ಡಾ. ಅಜಯ್ ಸಿಂಗ್ ಅಭಯ ನೀಡಿದರು.

ಜೇವರ್ಗಿ- ಯಡ್ರಾಮಿಯಲ್ಲಿ ಬರ ಭೀಕರ
ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಕಂಡಿರುವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಳೆ, ಬಿತ್ತನೆ, ಬೆಳೆ ಪರಿಸ್ಥಿತಿ ಸೇರಿದಂತೆ ಅಧಿಕೃತ ಅಂಕಿ-ಅAಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅಜಯ್ ಸಿಂಗ್ ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಗಸ್ಟ್ ೨೭ ರ ಮಳೆ ವರದಿ ಪ್ರಕಾರ, ಜೇವರ್ಗಿ ತಾಲ್ಲೂಕಿನಲ್ಲಿ ಜೂನ್ ೧ ರಿಂದ ಆಗಸ್ಟ್ ೨೯ ರವರೆಗೆ ೩೯೩.೭ ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿತ್ತು ಆದರೆ ೧೮೪.೯ ಮಿ.ಮೀ. ಮಾತ್ರ ಮಳೆಯಾಗಿದೆ. ಇದರಿಂದ ಶೇ.೫೩ ರಷ್ಟು ಮಳೆ ಕೊರತೆ ದಾಖಲಾಗಿದೆ.
ಯಡ್ರಾಮಿ ತಾಲ್ಲೂಕಿನಲ್ಲಿ ಇದೇ ಅವಧಿಯಲ್ಲಿ ೩೨೭.೦ ಮಿ.ಮೀ. ವಾಡಿಕೆ ಮಳೆಯ ಬದಲಿಗೆ ೨೦೧.೦ ಮಿ.ಮೀ. ಮಳೆಯಾಗಿದ್ದು, ಶೇ.೩೯ ರಷ್ಟು ಕೊರತೆ ದಾಖಲಾಗಿದೆ.

ಆಗಸ್ಟ್ನಲ್ಲೂ ಜೇವರ್ಗಿ-ಯಡ್ರಾಮಿಗೆ ಮಳೆ ಕೊರತೆ:

ಆಗಸ್ಟ್ ೧ರಿಂದ ೨೯ರವರೆಗೆ ಜೇವರ್ಗಿ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ ೧೪೪.೩ ಮಿ.ಮೀ. ಮಳೆಯಾಗಬೇಕಾಗಿತ್ತು, ಈ ಅವಧಿಯಲ್ಲಿ ಕೇವಲ ೩೫.೨ ಮಿ.ಮೀ. ಮಳೆಯಾಗಿದೆ. ಇದರಿಂದ ತಾಲ್ಲೂಕಿನಲ್ಲಿ ಶೇ.೭೬ರಷ್ಟು ಮಳೆ ಕೊರತೆ ದಾಖಲಾಗಿದೆ.
ಇದೇ ಅವಧಿಯಲ್ಲಿ ಯಡ್ರಾಮಿ ತಾಲ್ಲೂಕಿನಲ್ಲಿ ಸಾಮಾನ್ಯ ಮಳೆ ೧೧೭.೨ ಮಿ.ಮೀ. ಇರಬೇಕಾಗಿದ್ದರೆ, ವಾಸ್ತವವಾಗಿ ಕೇವಲ ೩೬.೬ ಮಿ.ಮೀ. ಮಳೆಯಾಗಿದೆ. ಪರಿಣಾಮವಾಗಿ ಶೇ.೬೯ ರಷ್ಟು ಮಳೆ ಕೊರತೆ ಉಂಟಾಗಿದೆ.
ಆಗಸ್ಟ್ ತಿಂಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ನಿರಂತರ ಮಳೆ ಕೊರತೆಯಿಂದ ಹತ್ತಿ, ಹೆಸರು ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಗೆ ತೀವ್ರ ಹೊಡೆತ ಬೀಳುವ ಸಾಧ್ಯತೆ ಇದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ.
ಹೋಬಳಿವಾರು ಅಂಕಿ-ಅAಶಗಳ ಪ್ರಕಾರ, ಜೇವರ್ಗಿ ಹೋಬಳಿಯಲ್ಲಿ ಶೇ.೫೨, ಅಂದೋಲಾ ಹೋಬಳಿಯಲ್ಲಿ ಶೇ.೫೮ ಹಾಗೂ ನೆಲೋಗಿ ಹೋಬಳಿಯಲ್ಲಿ ಶೇ.೪೫ ರಷ್ಟು ಮಳೆ ಕೊರತೆ ಕಂಡುಬAದಿದೆ. ಯಡ್ರಾಮಿ ಹೋಬಳಿಯಲ್ಲಿ ಶೇ.೪೪ ಹಾಗೂ ಇಜೇರಿ ಹೋಬಳಿಯಲ್ಲಿ ಶೇ.೩೭ ರಷ್ಟು ಕೊರತೆ ದಾಖಲಾಗಿದೆ.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳ ರೈತರು ಉತ್ತಮ ಪ್ರಮಾಣದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡಿದ್ದಾರೆ.
೨೦೨೬-೨೭ನೇ ಸಾಲಿನ ಖಾರಿಫ್ ಬೆಳೆ ವಿಮೆ ನೋಂದಣಿ ಮಾಹಿತಿಯಂತೆ ಜೇವರ್ಗಿಯಲ್ಲಿ ೪೨,೭೬೯ ಅರ್ಜಿಗಳು ಸಲ್ಲಿಕೆಯಾಗಿದ್ದು, ೫೮,೬೪೨.೮೨ ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶಕ್ಕೆ ?೩೪೭.೪೪ ಕೋಟಿ ವಿಮಾ ಮೊತ್ತ ನಿಗದಿಯಾಗಿದೆ.
ಯಡ್ರಾಮಿಯಲ್ಲಿ ೨೮,೫೭೨ ಅರ್ಜಿಗಳು ಸಲ್ಲಿಕೆಯಾಗಿದ್ದು, ೩೮,೯೪೩.೧೨ ಹೆಕ್ಟೇರ್ ಪ್ರದೇಶ ವಿಮಾ ವ್ಯಾಪ್ತಿಗೆ ಒಳಪಟ್ಟಿದೆ. ಒಟ್ಟು ?೨೩೨.೭೬ ಕೋಟಿ ವಿಮಾ ಮೊತ್ತವಿದ್ದು, ರೈತರ ಪಾಲು ?೫.೯೨ ಕೋಟಿಯಾಗಿದೆ.
………………….
“ರೈತರು ಆತಂಕಪಡುವ ಅಗತ್ಯವಿಲ್ಲ”

ಜೇವರ್ಗಿ ಮತ್ತು ಯಡ್ರಾಮಿ ರೈತರು ಆತಂಕಪಡುವ ಅಗತ್ಯವಿಲ್ಲ. ಸರ್ಕಾರ ರೈತರೊಂದಿಗೆ ಇದೆ. ಮಳೆ ಪರಿಸ್ಥಿತಿ ಹಾಗೂ ಬೆಳೆ ಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ರೈತರಿಗೆ ಅಗತ್ಯವಿರುವ ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು. ರೈತರ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ. ಸರ್ಕಾರದ ಮುಂದೆ ರೈತರ ಹಿತವೇ ಮೊದಲ ಆದ್ಯತೆಯಾಗಿದೆ.
-ಡಾ. ಅಜಯ್ ಧರ್ಮಸಿಂಗ್, ಸಣ್ಣ ನೀರಾವರಿ, ವಿಜ್ಞಾನ- ತಂತ್ರಜ್ಞಾನ ಖಾತೆ ಸಚಿವರು.