Home ಮುಖಪುಟ ಸುದ್ದಿ ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಗೆ ಭಾರೀ ಬೆಂಬಲ

ಬಿಜೆಪಿ ಬಳ್ಳಾರಿ ಚಲೋ ಪಾದಯಾತ್ರೆಗೆ ಭಾರೀ ಬೆಂಬಲ

ಕಾರಟಗಿ (ಕೊಪ್ಪಳ), ಸೆ. ೫- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಬಳ್ಳಾರಿ ಚಲೋ ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕಾರಟಗಿಯ ನವಲಿ ಸರ್ಕಲ್‌ನಿಂದ ಪಾದಯಾತ್ರೆ ಆರಂಭವಾಗಿದ್ದು,ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ನಿನ್ನೆ ಕೊಪ್ಪಳ ಜಿಲ್ಲೆಯ ಕಾರಟಗಿಗೆ ತಲುಪಿದ್ದ ಪಾದಯಾತ್ರೆ, ಇಂದು ಜಂಗಮರ ಕಾಲ್ಗುಡಿ ವರೆಗೆ ಸಾಗಲಿದ್ದು, ಸಿದ್ಧಾಪುರದಲ್ಲಿ ಭೋಜನ ವಿರಾಮದ ಕ್ಕೆ ನಂತರ ಬಿಜೆಪಿ ನಾಯಕರು ಇಂದು ಒಟ್ಟು ೨೩ ಕಿ.ಮೀ. ನಡೆಯಲಿದ್ದಾರೆ. ಈಗಾಗಲೇ ನಾಲ್ಕು ದಿನಗಳಲ್ಲಿ ೭೮ ಕಿ.ಮೀ. ಕ್ರಮಿಸಿರುವ ಪಾದಯಾತ್ರೆ ಇಂದು ಶತಕದ ಗಡಿ ದಾಟಲಿದೆ.

ನವಲಿ ಜಲಾಶಯ ನಿರ್ಮಾಣ ಹಾಗೂ ನೀರಾವರಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಇಂದಿನ ಹೋರಾಟ ನಡೆಸುತ್ತಿದೆ. ವಿಜಯೇಂದ್ರ ಅವರಿಗೆ ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದಾರೆ.

ಕಾರ್ಯಕರ್ತರ ಮನೆಗಳಿಗೆ ಭೇಟಿ :


ಪಾದಯಾತ್ರೆ ಆರಂಭಕ್ಕೂ ಮುನ್ನ ಬಿ.ವೈ. ವಿಜಯೇಂದ್ರ ಕಾರಟಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದರು.ಮಹಿಳೆಯರು ವಿಜಯೇಂದ್ರ ಅವರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಸ್ವಾಗತಿಸಿದರು.ರಾಖಿ ಕಟ್ಟಿದ ಸಹೋದರಿಯರಿಗೆ ವಿಜಯೇಂದ್ರ ಉಡುಗೊರೆ ನೀಡಿದರು.


ಬಳಿಕ ಕಾರ್ಯಕರ್ತರ ಮನೆಯಲ್ಲಿ ಟೀ ಸೇವಿಸಿದ ವಿಜಯೇಂದ್ರ, ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ವೇಳೆ ದೇವಸ್ಥಾನದಲ್ಲಿ ಗೋ ಪೂಜೆ ನೆರವೇರಿಸಿದರು. ಮಹಿಳೆಯರು ಆರತಿ ಬೆಳಗಿ ಅವರನ್ನು ಸ್ವಾಗತಿಸಿದರೆ, ಅರ್ಚಕರು ರಾಜ್ಯದ ಮುಖ್ಯಮಂತ್ರಿಯಾಗುವಂತೆ ಹರಸಿದರು.


ಕಾರಟಗಿಯ ಹಿರಿಯ ಬಿಜೆಪಿ ಕಾರ್ಯಕರ್ತ ವಿರೂಪಾಕ್ಷಪ್ಪ ನಿವಾಸಕ್ಕೂ ವಿಜಯೇಂದ್ರ ಭೇಟಿ ನೀಡಿದರು.ನಂತರ ಗ್ರಾಮದ ಕಟ್ಟೆಯಲ್ಲಿ ಕುಳಿತಿದ್ದ ಹಿರಿಯ ನಾಗರಿಕರೊಂದಿಗೆ ಮಾತುಕತೆ ನಡೆಸಿದರು.

ಪಾದಯಾತ್ರೆಗೆ ನಾಯಕರ ಬೆಂಬಲ:


ಕಾರಟಗಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿಗರು ಭಾಗವಹಿಸಿದ್ದರು.ರಮೇಶ್ ಜಾರಕಿಹೊಳಿ ಭಾವಚಿತ್ರವಿರುವ ಪ್ಲಕಾರ್ಡ್‌ಗಳನ್ನು ಹಿಡಿದು ಜೈಕಾರ ಕೂಗುತ್ತಾ ಬೆಂಬಲಿಗರು ಪಾದಯಾತ್ರೆಯಲ್ಲಿ ಸಾಗಿದರು.


ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕೂಡ ಐದನೇ ದಿನದ ಪಾದಯಾತ್ರೆಗೆ ಆಗಮಿಸಿದರು. ಹೊನ್ನಾಳಿ ಕ್ಷೇತ್ರದಿಂದ ನೂರಾರು ಕಾರ್ಯಕರ್ತರನ್ನು ಕರೆತಂದಿದ್ದ ಅವರು,ಪಾದಯಾತ್ರೆ ವೇಳೆ ರಾಜುಗೌಡ ಕೈ ಹಿಡಿದು ಡಾನ್ಸ್ ಮಾಡಿ ಗಮನ ಸೆಳೆದರು.


ಕಾರಟಗಿಯ ಮರ್ಲಾನಹಳ್ಳಿಗೆ ಬಳ್ಳಾರಿ ಚಲೋ ಪಾದಯಾತ್ರೆ ಆಗಮಿಸಿದ ವೇಳೆ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಜೆಸಿಬಿ ಮೂಲಕ ಹೂಮಳೆ ಸುರಿಸಿ ವಿಜಯೇಂದ್ರ ನೇತೃತ್ವದ ಪಾದಯಾತ್ರೆಯನ್ನು ಬರಮಾಡಿಕೊಳ್ಳಲಾಯಿತು.

ತಂಗಡಗಿ ಟ್ವೀಟ್‌ಗೆ ವಿಜಯೇಂದ್ರ ತಿರುಗೇಟು :


ತಮ್ಮ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಚಿವ ಶಿವರಾಜ ತಂಗಡಗಿ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ,ಸಚಿವ ಶಿವರಾಜ ತಂಗಡಗಿ ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ಎಚ್ಚರಿಸಿದರು.


ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ೩೦ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಅವರನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಷಡ್ಯಂತ್ರ ಮತ್ತು ಕುತಂತ್ರ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಆರೋಪಿಸಿದರು.


ಭ್ರಷ್ಟಾಚಾರದ ಕುರಿತು ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆಯನ್ನೂ ಗಮನಿಸಿದ್ದೇನೆ.ಅವರಿಗೆ ವಿಧಾನಸೌಧದಲ್ಲಿ ಉತ್ತರ ನೀಡುತ್ತೇನೆ. ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪಗಳ ವಿಚಾರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗಲೇ ನ್ಯಾಯಾಲಯದಲ್ಲಿ ಅವರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಹಾಗಾಗಿ ಯಡಿಯೂರಪ್ಪ ಬಗ್ಗೆ ಮಾತನಾಡಲು ಬಿ.ಕೆ.ಹರಿಪ್ರಸಾದ್ ಅವರಿಗೆ ಯೋಗ್ಯತೆ ಇಲ್ಲ ಎಂದು ಟೀಕಿಸಿದರು.


ಇದೇ ವೇಳೆ ಕೊಪ್ಪಳ ಜಿಲ್ಲೆಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಮೊದಲು ಅದನ್ನು ಸರಿಪಡಿಸುವಂತೆ ಸರ್ಕಾರಕ್ಕೆ ಸೂಚಿಸಿ, ಬಳಿಕ ಯಡಿಯೂರಪ್ಪ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.