Home ಮುಖಪುಟ ಸುದ್ದಿ ಕೆಪಿಎಸ್‌ಸಿ ಹಗರಣ : ಸಾಹುಕರ್‌ಗೆ ಸಿಐಡಿ ೩ನೇ ನೋಟಿಸ್

ಕೆಪಿಎಸ್‌ಸಿ ಹಗರಣ : ಸಾಹುಕರ್‌ಗೆ ಸಿಐಡಿ ೩ನೇ ನೋಟಿಸ್

ಬೆಂಗಳೂರು.ಸೆ. ೪- ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಹಗರಣ ಸಂಬಂಧ ನಿನ್ನೆ ಸಿಐಡಿ ವಿಚಾರಣೆಗೆ ಹಾಜರಾಗಿದ್ದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ಅವರಿಗೆ ಸಿಐಡಿ ಮೂರನೇ ನೋಟಿಸ್ ಜಾರಿ ಮಾಡಿದೆ.

ನೇಮಕಾತಿ ಹಗರಣದಲ್ಲಿ ಶಿವಶಂಕರಪ್ಪ ಸಾಹುಕರ್ ಹಣ ಪಡೆದ ಬಗ್ಗೆ ಹೈಕೋರ್ಟ್‌ಗೆ ಸಿಐಡಿ ದಾಖಲೆ ನೀಡಿತ್ತು. ಜೊತೆಗೆ ವಿಚಾರಗೆ ಹಾಜರಾಗುವಂತೆ ಶಿವಶಂಕರಪ್ಪ ಸಾಹುಕರ್‌ಗೆ ಎರಡು ಬಾರಿ ನೋಟಿಸ್ ನೀಡಿತ್ತು. ಸಿಐಡಿ ೨ ಬಾರಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸಿಐಡಿ ವಿಚಾರಣೆ ಶಿವಶಂಕರಪ್ಪ ಸಾಹುಕರ್ ಹಾಜರಾಗಿದ್ದರು. ಸುಮಾರು ೨ ಗಂಟೆಗಳ ಕಾಲ ನಡೆಸಿದ ವಿಚಾರಣೆ ವೇಳೆ ನೇಮಕಾತಿ ಸಂಬಂಧ ಶಿವಶಂಕರಪ್ಪಗೆ ಸಿಐಡಿ ಅಧಿಕಾರಿಗಳು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ಜೊತೆಗೆ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿ ಹಾಗೂ ದಾಖಲೆಗಳನ್ನು ನೀಡುವಂತೆ ಶಿವಶಂಕರಪ್ಪಗೆ ಸೂಚಿಸಿದ್ದಾರೆ.

ಕಳೆದ ರಾತ್ರಿ ೨ ಗಂಟೆಗಳ ಸುರ್ಧೀಘ ವಿಚಾರಣೆ ಎದುರಿಸಿದ್ದ ಶಿವಶಂಕರಪ್ಪ ಸಾಹುಕರ್ ಸಿಐಡಿ ಕಚೇರಿಯಿಂದ ವಾಪಸ್ ಆಗಿದ್ದು, ಸಿಐಡಿ ಕೇಳಿರುವ ಮಾಹಿತಿ, ದಾಖಲೆಗಳನ್ನು ಹಾಜರುಪಡಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

೩ನೇ ಬಾರಿ ನೋಟಿಸ್


ಕೆಪಿಎಸ್ ಸಿ ನೇಮಕಾತಿ ಹಗರಣ ಸಂಬಂಧ ಈಗಾಗಲೇ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್‌ಗೆ ಈಗಾಗಲೇ ೨ ಬಾರಿ ನೋಟಿಸ್ ನೀಡಿದ್ದ ಸಿಐಡಿ ಅಧಿಕಾರಿಗಳು ಮೂರನೇ ಬಾರಿ ನೋಟಿಸ ಜಾರಿಗೊಳಿಸಿದ್ದಾರೆ. ಎರಡು ಬಾರಿ ನೋಟಿಸ್ ಕೊಟ್ಟ ವೇಳೆ ವಿಚಾರಣೆಗೆ ಹಾಜರಾಗಿದ್ದ ಶಿವಶಂಕರಪ್ಪಗೆ ಸಿಐಡಿ ಕೊಟ್ಟಿರುವ ಮೂರನೇ ನೋಟಿಸ್ ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಎಷ್ಟು ಬಾರಿ ವಿಚಾರಣೆಗೆ ಕರೆದರೂ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ನಿರೀಕ್ಷಣಾ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆ


ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರು ಬಂಧನ ಭೀತಿಯಿಂದ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ ೭ಕ್ಕೆ ಮುಂದೂಡಿದೆ.


ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಪೀಠವು ಸಾಹುಕಾರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು,ನಿಮ್ಮ ಪಾತ್ರವೂ ಕಂಡುಬಂದಿದೆ… ನಿಮಗೂ ಎಲ್ಲವೂ ತಿಳಿದಿತ್ತು ಎಂದು ಮೌಖಿಕವಾಗಿ ಹೇಳಿದೆ. ಉನ್ನತ ಹುದ್ದೆಯಲ್ಲಿದ್ದು ಇಂತಹ ಕೃತ್ಯ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಅಧಿಕಾರಿಗಳನ್ನು ನೇಮಿಸಿ ಒಳ್ಳೆಯ ಆಡಳಿತ ನಿರೀಕ್ಷೆ ಸಾಧ್ಯವೆ? ಎಂದು ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ತರಾಟೆ ತೆಗೆದುಕೊಂಡಿದೆ.

ಶಿವಶಂಕರಪ್ಪ ಸಾಹುಕಾರ್‌ಗೆ ಬಂಧನದ ಭೀತಿ


ಈಗಾಗಲೇ ಈ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೂಡ ಪ್ರತ್ಯೇಕವಾಗಿ ಹಣದ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿದ್ದು, ಸಾಹುಕಾರ್ ಅವರ ನಿವಾಸದ ಮೇಲೆಯೂ ದಾಳಿ ನಡೆಸಿತ್ತು. ಪ್ರಸ್ತುತ ಹೈಕೋರ್ಟ್‌ನಿಂದ ಯಾವುದೇ ರೀತಿಯ ಮಧ್ಯಂತರ ರಕ್ಷಣೆ ಸಿಗದ ಕಾರಣ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಬಂಧನದ ಭೀತಿ ಎದುರಾಗಿದೆ

ಬಸವರಾಜ್ ಕನ್ನಾಳೆ ಕರ್ಮಕಾಂಡ ಬಯಲು


ಕೆಪಿಎಸ್‌ಸಿ ಪಶುವೈದ್ಯಕೀಯ ನೇಮಕಾತಿ ಹಗರಣ ಕೇಸನಲ್ಲಿ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ.ಕೆಪಿಎಸ್‌ಸಿ ಹಗರಣದಲ್ಲಿ ಬಂದ ಕೋಟಿ ಕೋಟಿ ಹಣದಿಂದಲೇ ಕನ್ನಾಳೆ ಕೃಷಿ ಭೂಮಿ ಖರೀದಿ ಮಾಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.


ಕನ್ನಾಳೆ ಒಂದು ವರ್ಷದ ಹಿಂದೆಯೇ ಸುಮಾರು ೫ ಕೋಟಿ ಮೌಲ್ಯದ ೨೦ ಕೃಷಿ ಭೂಮಿ ಖರೀದಿ ಮಾಡಿದ್ದ. ಪ್ರತಿ ಎಕರೆಗೆ ಸುಮಾರು ೨೫ ಲಕ್ಷ ರೂಪಾಯಿ ದರದಲ್ಲಿ ಜಮೀನು ಖರೀದಿ ಮಾಡಲಾಗಿದೆ. ಬೀದರ್ ತಾಲೂಕಿನ ಯರನಹಳ್ಳಿ ಗ್ರಾಮದ ಜನವಾಡ ರಸ್ತೆಯಲ್ಲಿರುವ ಸರ್ವೆ ನಂಬರ್ ೫೩, ಹಿಸ್ಸಾ ನಂಬರ್ ೧ರ ಜಮೀನು ಖರೀದಿಗೆ ಸಂಬಂಧಿಸಿದ ದಾಖಲೆಗಳು ಇದೀಗ ಗಮನ ಸೆಳೆಯುತ್ತಿವೆ. ಈ ಜಮೀನನ್ನು ಶೋಭಾ ಎಂಬುವವರಿಂದ ಬಸವರಾಜ್ ಕನ್ನಾಳೆ ಖರೀದಿಸಿದ್ದ ಅನ್ನೋದು ಗೊತ್ತಾಗಿದೆ.ಈ ಬಗ್ಗೆಯೂ ಸಿಐಡಿ ತಂಡಗಳು ತನಿಖೆ ನಡೆಸುತ್ತಿವೆ.

ಆರು ಅಭ್ಯರ್ಥಿಗಳು ವಿಚಾರಣೆಗೆ ಹಾಜರು


ಪಶುವೈದ್ಯಕೀಯ ಹುದ್ದೆಗಳ ನೇಮಕಾತಿಗಳಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬೀದರ್ ಜಿಲ್ಲೆಯ ಬಾಲ್ಕಿ ಮೂಲದ ಆರು ಅಭ್ಯರ್ಥಿಗಳು ಸಿಐಡಿ ವಿಚಾರಣೆಗೆ ಹಾಜರಾಗಿದ್ದರು. ಬೆಂಗಳೂರಿನ ಕೆಐಎಎಲ್ ಏರ್ಪೋರ್ಟ್ ನಿಂದ ಸಿಐಡಿ ಕಚೇರಿಗೆ ಬಂದ ಅಭ್ಯರ್ಥಿಗಳು ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.