
ಕಲಬುರಗಿ: ಶಿಕ್ಷಕರ ಸೇವೆ ಅಮೂಲ್ಯ. ಅವರು ವಿದ್ಯಾರ್ಥಿಗಳ ಜೀವನಕ್ಕೆ ಜ್ಞಾನ, ಸಂಸ್ಕಾರ ಮತ್ತು ಉತ್ತಮ ಮೌಲ್ಯಗಳನ್ನು ನೀಡುತ್ತಾರೆ. ಶಿಕ್ಷಕರ ಸೇವೆ, ಸಲಹೆಗಳನ್ನು ಗೌರವಿಸುವುದು ಮತ್ತು ಅವರ ಶ್ರಮವನ್ನು ಕೃತಜ್ಞತೆಯಿಂದ ಸ್ಮರಿಸುವುದು ಕರ್ತವ್ಯವಾಗಿದೆ. ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಮಾನವ ಸಂಪನ್ಮೂಲವಾಗುತ್ತಾರೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‍ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಶಿಕ್ಷಕರ ದಿನಾಚರಣೆ’ಯ ಕಾರ್ಯಕ್ರಮವನ್ನು ಡಾ.ಸರ್ವೆಪಲ್ಲಿ ರಾಧಾಕೃಷ್ಣನ್‍ರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ ವೃತ್ತಿ ಪವಿತ್ರವಾದದ್ದು. ಶಿಕ್ಷಕರಿಗೆ ನಿವೃತ್ತಿಯಿಲ್ಲ. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಕೊಡುಗೆ ಅನನ್ಯವಾಗಿದೆ. ಭಾರತ ಸರ್ಕಾರವು 1962ರಿಂದ ನಮ್ಮ ದೇಶದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅಧಿಕೃತವಾಗಿ ಆಚರಿಸಲು ಆರಂಭಿಸಿದೆ. ಶಿಕ್ಷಕರ ಶ್ರಮ, ತ್ಯಾಗ, ಕೊಡುಗೆ, ಸೇವೆಯನ್ನು ಗೌರವಿಸುವುದು ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸುವುದು ದಿನಾಚರಣೆಯ ಉದ್ದೇಶವಾಗಿದೆ. ಬದ್ದತೆಯಿಂದ ಕಾರ್ಯನಿರ್ವಹಿಸಿ, ವೃತ್ತಿ ಘನತೆಯನ್ನು ಕಾಪಾಡೋಣ ಎಂದರು.
ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್ ಮಾತನಾಡಿ, ಶಿಕ್ಷಕರು ಪಠ್ಯದ ಜೊತೆಗೆ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಬಿತ್ತುವುದು, ಸಾಧನೆಗೆ ಪ್ರೋತ್ಸಾಹಿಸುವುದು, ಸಕಾರಾತ್ಮಕ ಕಲಿಕೆಯ ವಾತಾವರಣ ನಿರ್ಮಿಸುವುದು ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ನಿಲೊಫರ್ ಶೇಖ್, ಪೂಜಾ ಹೂಗಾರ, ಕಾವೇರಿ ಹೌದೆ, ಮುಸ್ಕಾನ್ ಶೇಖ್, ರುಕ್ಸಾನಾ ಪಟೇಲ್, ಸ್ನೇಹಾ ಚೌಹಾಣ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.






























