Home ಜಿಲ್ಲೆ ಜನಸೇವಾ ಶಾಲೆ: ಕೃಷ್ಣ- ರಾಧೆ ವೇಷಧಾರಿ ಮಕ್ಕಳ ಮೆರವಣಿಗೆ

ಜನಸೇವಾ ಶಾಲೆ: ಕೃಷ್ಣ- ರಾಧೆ ವೇಷಧಾರಿ ಮಕ್ಕಳ ಮೆರವಣಿಗೆ

ಬೀದರ್: ನಗರದ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಶುಕ್ರವಾರ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಅವರ ನೇತೃತ್ವದಲ್ಲಿ ನಡೆದ ಕೃಷ್ಣ-ರಾಧೆ ವೇಷಧಾರಿ ಮಕ್ಕಳ ನೃತ್ಯ, ಮೊಸರು ಗಡಿಗೆ ಒಡೆಯುವ ಸ್ಪರ್ಧೆ, ಬೆಣ್ಣೆ ಸವಿಯುವುದು, ಮಾತೆಯರು-ಶಿಕ್ಷಕಿಯರ ಕೋಲಾಟ ಮತ್ತಿತರ ಕಾರ್ಯಕ್ರಮಗಳು ಸಂಭ್ರಮ ಇಮ್ಮಡಿಗೊಳಿಸಿದವು.
ಡಯಟ್ ಉಪನ್ಯಾಸಕಿ ಗೀತಾ ಗಡ್ಡಿ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿದರು. ಹಿರಿಯ ಸದಸ್ಯ ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ಶಿಶು ಮಂದಿರ ಮುಖ್ಯಶಿಕ್ಷಕಿ ಜಾನಕಿ ಕುಲಕರ್ಣಿ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ನೀಲಮ್ಮ ಚಾಮರೆಡ್ಡಿ, ಪ್ರೌಢಶಾಲೆ ಮುಖ್ಯಶಿಕ್ಷಕ ರಾಹುಲ್ ಮೇಟೆಕರ್ ಇದ್ದರು.
ಇದಕ್ಕೂ ಮುನ್ನ ಮಾಧವನಗರದ ಹನುಮಾನ ಮಂದಿರದಿಂದ ಪ್ರತಾಪನಗರ, ಎಲ್.ಐ.ಸಿ. ಕಾಲೊನಿ ಮಾರ್ಗವಾಗಿ ಜನಸೇವಾ ಶಾಲೆ ವರೆಗೆ ನಡೆದ ನೂರಾರು ಕೃಷ್ಣ-ರಾಧೆ ವೇಷಧಾರಿ ಮಕ್ಕಳ ಆಕರ್ಷಕ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.