Home ಮುಖಪುಟ ಸುದ್ದಿ ವಿಮಾನ ನಿಲ್ದಾಣದಲ್ಲಿ ೧೩.೧೪ ಕೋಟಿ ಮೌಲ್ಯದ ಗಾಂಜಾ ವಶ

ವಿಮಾನ ನಿಲ್ದಾಣದಲ್ಲಿ ೧೩.೧೪ ಕೋಟಿ ಮೌಲ್ಯದ ಗಾಂಜಾ ವಶ

ಬೆಂಗಳೂರು, ಜೂ.೧೫- ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೈಡ್ರೋಪೋನಿಕ್ ಗಾಂಜಾವನ್ನು ಸಾಗಿಸುತ್ತಿದ್ದ ಬೇಧಿಸಿದ ಕಸ್ಟಮ್ಸ್ ಅಧಿಕಾರಿಗಳು ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ೧೩.೧೪ ಕೋಟಿ ಮೌಲ್ಯದ
೩೮.೩೪ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಜಾಲದಲ್ಲಿದ್ದ ೬ ಮಂದಿ ಪ್ರಯಾಣಿಕರನ್ನು ಬಂಧಿಸಲಾಗಿದೆ.


ಜಳೆದ ಜೂ.೧೧ ರಂದು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿಳಿದ ೫ ಜನ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಕಳ್ಳಸಾಗಣೆ ಬೆಳಕಿಗೆ ಬಂದಿದೆ.


ಈ ಆರೋಪಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆಯಿಂದ ಬಚಾವಾಗಲು ತಮ್ಮ ಚೆಕ್-ಇನ್ ಬ್ಯಾಗೇಜ್‌ಗಳ ಒಳಗೆ ಅತ್ಯಂತ ಚಾಣಾಕ್ಷತನದಿಂದ ಗಾಂಜಾವನ್ನು ಅಡಗಿಸಿಟ್ಟಿದ್ದರು.


ಅಧಿಕಾರಿಗಳು ಬ್ಯಾಗ್‌ಗಳನ್ನು ಕೂಲಂಕಷವಾಗಿ ಸ್ಕ್ಯಾನ್ ಮಾಡಿದಾಗ ಒಟ್ಟು ೨೪.೮ ಕೆಜಿ ತೂಕದ ಅತ್ಯಾಧುನಿಕ ಹೈಡ್ರೋಪೋನಿಕ್ ಗಾಂಜಾ ಪತ್ತೆಯಾಗಿದೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು ೮.೬೮ ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಐದೂ ಜನರನ್ನು ತಕ್ಷಣವೇ ಬಂಧಿಸಲಾಗಿದೆ.


ಕಳೆದ ಜೂ.೧೩ ರಂದು ಬ್ಯಾಂಕಾಕ್‌ನಿಂದಲೇ ಬಂದ ಮತ್ತೊಂದು ವಿಮಾನದ ಪ್ರಯಾಣಿಕನ ಮೇಲೆ ಕಸ್ಟಮ್ಸ್ ಕಣ್ಣಿಟ್ಟಿತ್ತು. ಬೆಂಗಳೂರಿಗೆ ಬಂದಿಳಿದ ಓರ್ವ ಶಂಕಿತ ಪ್ರಯಾಣಿಕನನ್ನು ತಡೆದು ಆತನ ಚೆಕ್-ಇನ್ ಬ್ಯಾಗ್ ಹಾಗೂ ಹ್ಯಾಂಡ್ ಲಗೇಜ್ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಮತ್ತೊಂದು ಶಾಕ್ ಕಾದಿತ್ತು. ಈತನ ಬ್ಯಾಗ್‌ನಲ್ಲೂ ಕೂಡ ವ್ಯಾಕ್ಯೂಮ್ ಪ್ಯಾಕ್ ಮಾಡಲಾಗಿದ್ದ ೧೩.೫೪ ಕೆಜಿ ಹೈಡ್ರೋಪೋನಿಕ್ ಗಾಂಜಾ ಸಿಕ್ಕಿಬಿದ್ದಿದೆ. ಇದರ ಮೌಲ್ಯ ೪.೭೪ ಕೋಟಿ ರೂಗಳಾಗಿದೆ.
ಈ ಎರಡೂ ಪ್ರತ್ಯೇಕ ಕಾರ್ಯಾಚರಣೆಗಳಿಂದ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ತಮ್ಮ ೧೩.೧೪ ಕೋಟಿ ರೂ. ಬೆಲೆಬಾಳುವ ೩೮.೩೪ ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಕ್ಕೆ ಪಡೆದಂತಾಗಿದೆ.


ಬಂಧಿತ ೬ ಜನ ಆರೋಪಿಗಳ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಾದ ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಂತರರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಹಿಂದೆ ಬೆಂಗಳೂರಿನಲ್ಲಿ ಯಾರ್ಯಾರು ಇದ್ದಾರೆ ಮತ್ತು ಈ ಮಾದಕ ವಸ್ತುವನ್ನು ನಗರದ ಯಾವ ಭಾಗಗಳಿಗೆ ಸರಬರಾಜು ಮಾಡಲು ತರಲಾಗುತ್ತಿತ್ತು ಎಂಬುದನ್ನು ತಿಳಿಯಲು ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.