
ಅಕ್ರಮ ಆಸ್ತಿ ಪತ್ತೆ
ಬೆಂಗಳೂರು,ಜು.೮-ಆದಾಯಕ್ಕಿಂತ ನೂರಾರು ಪಟ್ಟು ಆಕ್ರಮ ಆಸ್ತಿ ಗಳಿಕೆ ಮಾಡಿರುವ ಐವರು ಇಂಜಿನಿಯರ್ ಗಳು ಸೇರಿ ೧೦ ಮಂದಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿರುವ ಲೋಕಾಯುಕ್ತರು ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ.
ತೋಟಗಾರಿಕೆ,ನೀರಾವರಿ ಸೇರಿ ವಿವಿಧ ಇಲಾಖೆಗಳ ೧೦ ಮಂದಿ ಭ್ರಷ್ಟ ಅಧಿಕಾರಿಗಳ ಮನೆ ಇತರೆಡೆ ಲೋಕಾಯುಕ್ತ ಅಧಿಕಾರಿಗಳು ಇಂದು ಮುಂಜಾನೆಯಿಂದಲೇ ಏಕಕಾಲದಲ್ಲಿ ದಾಳಿ ನಡೆಸಿ ನಗದು,ಚಿನ್ನಾಭರಣಗಳು, ವಾಹನಗಳು,ಐಷಾರಾಮಿ ವಸ್ತುಗಳು ಸೇರಿ ಕೋಟ್ಯಂತರ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಹಚ್ಚಿ ಶೋಧ ಕೈಗೊಂಡಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ದಕ್ಷಿಣ,ರಾಯಚೂರು ತುಮಕೂರು, ಕಲಬುರಗಿ,ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಹಲವಡೆ ಅಧಿಕಾರಿಗಳು ದಾಳಿ ನಡೆಸಿ ೧೦ ಮಂದಿ ಭ್ರಷ್ಟರ ಅಕ್ರಮ ಆಸ್ತಿಪಾಸ್ತಿ ದಾಖಲೆಗಳನ್ನು ಪರಿಶೀಲನೆ ಕೈಗೊಂಡಿದ್ದು,ಸಂಜೆ ವೇಳೆಗೆ ದಾಳಿಗೊಳಗಾದ ಅಧಿಕಾರಿಗಳು ಗಳಿಸಿರುವ ಅಕ್ರಮ ಆಸ್ತಿಪಾಸ್ತಿಗಳ ಒಟ್ಟಾರೆ ಮೌಲ್ಯ ಗೊತ್ತಾಗಲಿದೆ.
ರಾಯಚೂರಿನ ಕೃಷ್ಣ ಭಾಗ್ಯ ಜಲನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಪಾಟೀಲ್,ಚಿತ್ರದುರ್ಗದ ತೋಟಗಾರಿಕಾ ವಿಶ್ವವಿದ್ಯಾಲಯದ ಸಹಾಯಕ ಪ್ರೋಪೆಸರ್ ಶಂಕರ್ ಎಂ,ಚಿತ್ರದುರ್ಗದ ವಲಯ ಅರಣ್ಯಾಧಿಕಾರಿ ದುಗ್ಗಪ್ಪ ಬಿ.ಹೆಚ್,ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಕುಮಾರ್,ಕೆಆರ್ ಡಿಎಲ್ ನ ಸೂಪರಿಂಟೆಂಡೆಂಟ್ ಇಂಜಿನಿಯರ್ ಪ್ರವೀಣ್ ಬಿ.ಶ್ರೀ ಹರಿ,ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕಿ ಪುಷ್ಪ ಡಿ.ಆರ್,ತುಮಕೂರಿನ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಮಧುಸೂದನ್,ಬೆಂಗಳೂರು ದಕ್ಷಿಣ ಕುಂಬಳಗೋಡು ಪಂಚಾಯತ್ ನ ಪಿಡಿಓ ತಿಮ್ಮೇಗೌಡ,ಶಿವಮೊಗ್ಗದ ಸಂಶೋಧನಾ ವಿಭಾಗದ ಅಸಿಸ್ಟೆಂಟ್ ಕನ್ಸರ್ ವೇಟರ್ ಫಾರೆಸ್ಟ್ ಕಿರಣ್ ಅಂಗಡಿ ಹಾಗೂ ಕಲಬುರಗಿಯ ಗೆಸ್ಕಾಂನ ಎಇಇ ಅಮೃತರಾವ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿಗಳಾಗಿದ್ದಾರೆ.
ಬಲೆಗೆ ಬಿದ್ದಿರುವ ಅಧಿಕಾರಿಗಳ ಕಚೇರಿ ಮನೆಗಳು,ಸಂಬಂಧಿಕರ ಮನೆಗಳು, ಆಸ್ತಿಗಳ ಮೇಲೆ ನಡೆಸಿದ ಏಕಕಾಲಕ್ಕೆ ದಾಳಿಯಲ್ಲಿ ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿಪಾಸ್ತಿಯ ದಾಖಲೆ ಪತ್ರಗಳು ದೊರೆತಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗಿದೆ.
ರಾಯಚೂರಿನ ಕೃಷ್ಣ ಭಾಗ್ಯ ಜಲನಿಗಮದ ಕಾರ್ಯನಿರ್ವಾಹಕ ಇಂಜಿನಿಯರ್ ಬಸನಗೌಡ ಪಾಟೀಲ್ ಅವರ ಕಚೇರಿ ಮನೆ ಸೇರಿ ೭ ಕಡೆಗಳಲ್ಲಿ ದಾಳಿ ನಡೆಸಿ ೩೦ ಎಕರೆ ಭೂಮಿ ಹೊಂದಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದ ಭ್ರಷ್ಟರು
- ಬಸನಗೌಡ ಪಾಟೀಲ್
ಎಕ್ಸಿಕ್ಯುಟಿವ್ ಇಂಜಿನಿಯರ್, ಕೃಷ್ಣಾ ಭಾಗ್ಯ ಜಲನಿಗಮ ಲಿಮಿಟೆಡ್ ನಾರಾಯಣಪುರ ಬಲದಂಡೆ ಕಾಲುವೆ ವಿಭಾಗ ನಂ.೪, ರಾಯಚೂರು - ಶಂಕರ್ ಎಂ. – ಸಹಾಯಕ ಪ್ರಾಧ್ಯಾಪಕ, ಕೃಷಿ ಎಂಜಿನಿಯರಿಂಗ್ – ತೋಟಗಾರಿಕೆ ವಿಶ್ವವಿದ್ಯಾಲಯ, ಚಿತ್ರದುರ್ಗ
- ದುಗ್ಗಪ್ಪ ಬಿ.ಹೆಚ್. – ವಲಯ ಅರಣ್ಯ ಅಧಿಕಾರಿ, ಜಲಾನಯನ ಅಭಿವೃದ್ಧಿ ಇಲಾಖೆ, ಚಿತ್ರದುರ್ಗ
- ನರೇಂದ್ರ ಕುಮಾರ್ – ಎಕ್ಸಿಕ್ಯುಟಿವ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಬೆಂಗಳೂರು
- ಪ್ರವೀಣ್ ಬಿ.ಶ್ರೀಹರಿ – ಸೂಪರಿಂಡೆಂಟ್ ಇಂಜಿನಿಯರ್, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ, ಬೆಂಗಳೂರು
- ಪುಷ್ಪ ಡಿ.ಆರ್. – ಉಪ ನಿರ್ದೇಶಕಿ (ಆಡಳಿತ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬೆಂಗಳೂರು
- ಮಧುಸೂಧನ್ ಎನ್. – ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ತುಮಕೂರು
- ತಿಮ್ಮೇಗೌಡ – ಪಿಡಿಒ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ – ಬೆಂಗಳೂರು ದಕ್ಷಿಣ
- ಕಿರಣ್ ಅಂಗಡಿ – ಸಹಾಯಕ ಅರಣ್ಯ ಪರಿವರ್ತಕ, ಸಂಶೋಧನಾ ವಿಭಾಗ, ಶಿವಮೊಗ್ಗ
- ಅಮೃತ್ ರಾವ್ – ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜೆಸ್ಕಾಂ, ಕಲಬುರಗಿ






























