Home ಜಿಲ್ಲೆ ರೇವಪ್ಪಯ್ಯ ಸ್ವಾಮಿ ದೇವಸ್ಥಾನದಲ್ಲಿ ಹೋಳಿಗೆ ತುಪ್ಪ ಸವಿದ ನೂರಾರು ಭಕ್ತರು

ರೇವಪ್ಪಯ್ಯ ಸ್ವಾಮಿ ದೇವಸ್ಥಾನದಲ್ಲಿ ಹೋಳಿಗೆ ತುಪ್ಪ ಸವಿದ ನೂರಾರು ಭಕ್ತರು

ಬೀದರ,ಜು.08-ಬೀದರಿನ ಮೈಲೂರು-ಗುಂಪಾ ಹೈದರಾಬಾದ ರಸ್ತೆಯಲ್ಲಿ ಬರುವ ಪವಾಡ ಪುರುಷ ರೇವಪ್ಪಯ್ಯ ಸ್ವಾಮಿ ದೇವಸ್ಥಾನದಲ್ಲಿ ಹೋಳಿಗೆ ತುಪ್ಪದ ಬಿನ್ನಹ ಜಾತ್ರೆ ಅಂಗವಾಗಿ ನೂರಾರು ಭಕ್ತರು ಹೋಳಿಗೆ ತುಪ್ಪ ಪ್ರಸಾದ ಸವಿದು ಸ್ವಾಮಿ ಕೃಪೆಗೆ ಪಾತ್ರರಾದರು. ಹಳ್ಳದಕೇರಿಯ ಶಾಂತಕುಮಾರ ಭಕ್ತಾದಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ರೇವಪ್ಪಯ್ಯ ಮುತ್ಯಾ ಮೂಲತಃ ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ನಾವದಗಿ ಗ್ರಾಮದವರು. ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ಪವಾಡಗಳನ್ನು ಮಾಡಿ ಸರ್ವ ಧರ್ಮೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.ಅವರ ಪ್ರಮುಖ ಪವಾಡಗಳಲ್ಲಿ ಹೋಳಿಗೆ ತುಪ್ಪ ಬಿನ್ನಹವೂ ಒಂದು.

ಒಮ್ಮೆ ನಾವದಗಿಯ ಬಡವರ ಲಗ್ನದಲ್ಲಿ ತುಪ್ಪ ಕಡಿಮೆ ಬಿದ್ದಿತ್ತು. ಆಗ ರೇವಪ್ಪಯ್ಯ ಮುತ್ಯಾ ಪಕ್ಕದ ಕಲ್ಯಾಣಿ ಬಾವಿಯ ನೀರನ್ನು ತಂದು ತುಪ್ಪವಾಗಿ ಪರಿವರ್ತಿಸಿ ಮದುವೆಗೆ ಬಂದವರಿಗೆಲ್ಲ ಉಣಬಡಿಸಿದರೆಂಬ ಐತಿಹ್ಯವಿದೆ. ಅವರು ತಮ್ಮ ಜೀವಿತಾವಧಿಯಲ್ಲಿಯೂ ಹೋಳಿಗೆ ತುಪ್ಪ ಬಿನ್ನಹ ಆಯೋಜಿಸುತ್ತಿದ್ದರು. ಅಂದಿನಿಂದ ರೇವಪ್ಪಯ್ಯ ಸ್ವಾಮಿಯ ಎಲ್ಲ ದೇವಸ್ಥಾನಗಳಲ್ಲಿ ಹೋಳಿಗೆ ತುಪ್ಪ ಬಿನ್ನಹ ಜಾತ್ರೆ ಆಯೋಜಿಸಿ ಹೋಳಿಗೆ ತುಪ್ಪ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತದೆ.

ವೀರಶೈವ ಧರ್ಮ ಕ್ರಾಂತಿ ಹರಿಕಾರರು, ಬಹು ಭಾಷಿಕರು ಮತ್ತು ಅಪ್ಪಟ ಕನ್ನಡಾಭಿಮಾನಿಯಾದ ರೇವಪ್ಪಯ್ಯ ಸ್ವಾಮಿ ಬಸವಾದಿ ಶರಣರ ಘನ ವ್ಯಕ್ತಿತ್ವ ಹೊಂದಿದ್ದರು.