
ಬೀದರ್: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಶರಣರ ನಾಡು ಹಾಗೂ ಬಸವಣ್ಣನವರ ಕರ್ಮಭೂಮಿ ಬೀದರ್‍ಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ‘ಬೀದರ್ ಜಂಗ್’ ಪತ್ರಿಕೆ ವತಿಯಿಂದ ಭವ್ಯ ಸ್ವಾಗತ ಕೋರಿ, ಆತ್ಮೀಯವಾಗಿ ಸನ್ಮಾನಿಸಲಾಯಿತು.
ನಗರದ ವಾಲಿ ನಿಲಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ಬೀದರ್ ಜಂಗ್ ಪತ್ರಿಕೆಯ ಪ್ರಧಾನ ಸಂಪಾದಕರಾದ ದೀಪಕ್ ಶಿವಶರಣಪ್ಪ ವಾಲಿ ಹಾಗೂ ಯುವ ಉದ್ಯಮಿ ವಿವೇಕ್ ದೀಪಕ್ ವಾಲಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು.
ಮಾದರಿ ನಗರ ನಿರ್ಮಾಣಕ್ಕೆ ಒತ್ತು ನೀಡಲು ಮನವಿ
ಇದೇ ಸಂದರ್ಭದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ವಿಶೇಷ ಮನವಿ ಪತ್ರವನ್ನು ಸಲ್ಲಿಸಲಾಯಿತು.ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ, ನಗರ ಸೌಂದರ್ಯೀಕರಣ, ರಸ್ತೆ ಸಂಪರ್ಕ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು, ಬೀದರ್ ನಗರವನ್ನು ‘ಮಾದರಿ ನಗರ’ವನ್ನಾಗಿ ರೂಪಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವುದು.
ಈ ಪ್ರಮುಖ ಅಂಶಗಳನ್ನು ಮುಂದಿಟ್ಟುಕೊಂಡು ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಅಭಿವೃದ್ಧಿಗೆ ಆದ್ಯತೆ: ಸಿಎಂ ಅಭಯ
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ಬೀದರ್ ಜಿಲ್ಲೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಜಿಲ್ಲೆಯ ಅಗತ್ಯ ಯೋಜನೆಗಳಿಗೆ ವಿಶೇಷ ಆದ್ಯತೆ ನೀಡಿ, ಶೀಘ್ರದಲ್ಲೇ ಅವುಗಳನ್ನು ಅನುಷ್ಠಾನಗೊಳಿಸಲಾಗುವುದು” ಎಂದು ಸಕಾರಾತ್ಮಕವಾಗಿ ಸ್ಪಂದಿಸಿದರು ಹಾಗೂ ಅಭಯ ನೀಡಿದರು.
ಈ ಮಹತ್ವದ ಕಾರ್ಯಕ್ರಮದಲ್ಲಿ ಸಚಿವ ಈಶ್ವರ್ ಖಂಡ್ರೆ, ಶಾಸಕ ರಹೀಂ ಖಾನ್, ವಾಲಿ ಕುಟುಂಬದ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.



























