
ಬೀದರ್: ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕೋಚಿಂಗ್ ಸೆಂಟರ್‍ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಅವುಗಳನ್ನು ತಕ್ಷಣ ಬಂದ್ ಮಾಡಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ್, ಜಿಲ್ಲೆಯ ಹಲವು ಕೋಚಿಂಗ್ ಸೆಂಟರ್‍ಗಳು ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದು, ನಿಗದಿತ ವಯಸ್ಸಿಗಿಂತ ಕಡಿಮೆ ಮಕ್ಕಳನ್ನು ದಾಖಲಿಸಿಕೊಂಡು ಉತ್ತಮ ಅಂಕಗಳ ಭರವಸೆ ನೀಡಿ ಪೆÇೀಷಕರನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿದರು.
ಮಕ್ಕಳ ಮೇಲೆ ಅನಗತ್ಯ ಶೈಕ್ಷಣಿಕ ಒತ್ತಡ ಹೇರಿ ಅವರ ಬಾಲ್ಯ ಹಾಗೂ ಶಿಕ್ಷಣದ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಈ ಕುರಿತು ಹಲವು ಸಂಘ-ಸಂಸ್ಥೆಗಳು ದೂರು ನೀಡಿದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳ ಹಿತದೃಷ್ಟಿಯಿಂದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎಂಟು ದಿನಗಳೊಳಗೆ ಜಿಲ್ಲೆಯ ಎಲ್ಲಾ ಅನಧಿಕೃತ ಕೋಚಿಂಗ್ ಸೆಂಟರ್‍ಗಳ ಪರಿಶೀಲನೆ ನಡೆಸಿ ಅವುಗಳನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಎದುರು ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲೆಯ ಅನಧಿಕೃತ ಕೋಚಿಂಗ್ ಸೆಂಟರ್‍ಗಳನ್ನು ಪತ್ತೆಹಚ್ಚಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೇಮ್ಸ್ ಇಸ್ಲಾಂಪೂರ (ಜಿಲ್ಲಾಧ್ಯಕ್ಷ), ಎಂ.ಡಿ. ಮಸ್ತಾನಮುಲ್ಲಾ (ಪ್ರಧಾನ ಕಾರ್ಯದರ್ಶಿ),ಕಮಲಹಾಸನ ಭಾವಿದೊಡ್ಡ (ಕಾರ್ಯಕಾರಿಣಿ ಸದಸ್ಯ), ಡ್ಯಾನಲ್ ಮಂಗಲಪೇಟ (ಜಿಲ್ಲಾ ಉಪಾಧ್ಯಕ್ಷ), ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.



























