
ರಾಮನಗರ,ಜು.೩೦: ನಾಡದೇವತೆ ಕೃಪೆ ಹಾಗೂ ಕ್ಷೇತ್ರದ ಜನರ ಪ್ರಾರ್ಥನೆಯಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಚಾಮುಂಡೇಶ್ವರಿ ಕರಗವನ್ನ ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಜೊತೆಗೆ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಸೇವೆ ಮಾಡಲು ನನಗೆ ಕ್ಷೇತ್ರದ ಜನರ ಹಿತ ಮತ್ತು ಅಭಿವೃದ್ಧಿಯೇ ಔಷಧ ಎಂದು ನಂಬಿರುವ ನನಗೆ ಚಾಮುಂಡೇಶ್ವರಿ ಅಮ್ಮನವರು ಆಶೀರ್ವಾದ ಮಾಡಿದ್ದಾರೆ.ಬೆಂಗಳೂರು ದಕ್ಷಿಣ ಜಿಲ್ಲೆಯ ಪಾಲಿಗೆ ಈ ವರ್ಷ ನೆನಪಿನಲ್ಲಿಡುವ ವರ್ಷವಾಗಿದೆ.ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದು,ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವನ್ನು ನಗರದ ಜಿಲ್ಲಾ ಕ್ರೀಡಾಂಗಣ ಮತ್ತು ಅರಳೀಮರ ವೃತ್ತ ಎರಡು ಕಡೆಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್. ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಪುಟ್ಟಣ್ಣ, ರಾಮೋಜಿಗೌಡ, ಸುಧಾಮ್‌ದಾಸ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸೇರಿದಂತೆ ಅನೇಕ ನಾಯಕರು ಕರಗ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.ಪ್ರತಿವರ್ಷದಂತೆ ಈ ಬಾರಿಯೂ ದೇವಾಲಯಗಳಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನೆರವೇರಲಿವೆ. ಭಕ್ತರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದುರಾಗದಂತೆ ಕ್ರಮ ವಹಿಸಲಾಗಿದೆ.
ಇಡೀ ನಗರವನ್ನು ವಿದ್ಯುತ್ ದೀಪ ಹಾಗೂ ಪ್ರಮುಖ ವೃತ್ತಗಳನ್ನು ಹೂವಿನ ಅಲಂಕಾರಗಳಿಂದ ಶೃಂಗರಿಸಲಾಗುತ್ತಿದೆ.ಕರಗ ಮಹೋತ್ಸವಕ್ಕೆ ಬರುವ ಜನರ ಮನರಂಜನೆಗಾಗಿ ಆಗಸ್ಟ್ ೪ ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಲನಚಿತ್ರ ನಟರಾದ ಸುದೀಪ್, ನೀನಾಸಂ ಸತೀಶ್, ವರುಣ್, ಗಿಲ್ಲಿ ನಟ ನಟರಾಜ್,ನಟಿ ರುಚಿತಾರಾಮ್ ಸೇರಿದಂತೆ ಖ್ಯಾತ ನಟ, ನಟಿಯರು, ಹೆಸರಾಂತ ಗಾಯಕರಾದ ನವೀನ್ ಸಜ್ಜು ತಂಡ, ಆಲ್ ಓಕೆ ತಂಡ, ಚಂದನ್ ಶೆಟ್ಟಿ ತಂಡ, ಸನ್ನಿಧಿ ಗಣೇಶ್ ತಂಡಗಳು ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ದೇವಾಲಯಗಳ ಸಮಿತಿ ಮುಖ್ಯಸ್ಥರು, ನಗರಸಭೆ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹಬ್ಬದ ಯಶಸ್ಸಿಗೆ ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಧಾರ್ಮಿಕ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಲ್ಲಿದ್ದು ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಸಂಚಾರ ದಟ್ಟಣೆ ನಿಯಂತ್ರಿಸಲು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ, ಭಕ್ತರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.


































