Home ಮುಖಪುಟ ಸುದ್ದಿ ಸಚಿವ ಸ್ಥಾನ, ಒಂದು ಮಹಿಳೆಗೆ ಒಂದು ಒಬಿಸಿಗೆ ನೀಡಲಿ

ಸಚಿವ ಸ್ಥಾನ, ಒಂದು ಮಹಿಳೆಗೆ ಒಂದು ಒಬಿಸಿಗೆ ನೀಡಲಿ

ಬೆಂಗಳೂರು, ನ. ೨೭: ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಗೆ ಹಾಗೂ ಮತ್ತೊಂದನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶಾಸಕರ ಭವನದಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ. ನಾಗೇಂದ್ರ ನಿರಪರಾಧಿ ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಅವರಿಗೆ ಕ್ಲೀನ್‌ಚಿಟ್ ಸಿಕ್ಕಿರುವ ವಿಚಾರವೂ ಇದೆ ಎಂದರು. ಆದರೆ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಮೈಸೂರಿನಲ್ಲಿ ಆಪ್ತ ಶಾಸಕರೊಂದಿಗೆ ಒಗ್ಗಟ್ಟು ಪ್ರದರ್ಶಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಯಾವಾಗ ಜಗಳವಾಡಿದ್ದೇವೆ? ಯಾವಾಗ ಬೇರೆ ಬೇರೆಯಾಗಿದ್ದೇವೆ ಎಂದು ಪ್ರಶ್ನಿಸಿದರು.


ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಕೇಳಿದಾಗ, ಈಗ ನಮ್ಮ ಸರ್ಕಾರ ಇಲ್ಲ. ನಾನು ಮುಖ್ಯಮಂತ್ರಿ ಅಲ್ಲ. ಸರ್ಕಾರದ ಮುಖ್ಯಸ್ಥರು ಡಿ.ಕೆ. ಶಿವಕುಮಾರ್. ಅವರೇ ಸಮಸ್ಯೆ ಬಗೆಹರಿಸುತ್ತಾರೆ ಎಂದು ಭಾವಿಸಿದ್ದೇನೆ ಎಂದರು.


ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಹೊಸ ಯೋಜನೆಗಳನ್ನು ಜಾರಿಗೆ ತರಲು ಬಜೆಟ್‌ನಲ್ಲಿ ಅನುದಾನ ಇರಬೇಕು ಅಥವಾ ಪೂರಕ ಅಂದಾಜು ಪಟ್ಟಿಯಲ್ಲಿ ಹಣ ಒದಗಿಸಬೇಕು. ಈ ವರ್ಷ ಹೊಸ ಕಾರ್ಯಕ್ರಮ ಆರಂಭಿಸಲು ಅನುದಾನದ ಸಮಸ್ಯೆಯಿರಬಹುದು. ಮುಂದಿನ ವರ್ಷ ಮಾಡಬಹುದು. ಆದರೆ ಖಜಾನೆ ಖಾಲಿಯಾಗಿದೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.


ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಸು ಭಾಗ್ಯ ಯೋಜನೆ ಜಾರಿಗೆ ತರುವ ವಿಚಾರವಾಗಿ, ತಮ್ಮ ಸರ್ಕಾರದ ಅವಧಿಯಲ್ಲಿ ಪಶುಭಾಗ್ಯ, ಕ್ಷೀರಭಾಗ್ಯ ಮತ್ತು ಕ್ಷೀರಧಾರೆ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಇಂತಹ ಯೋಜನೆಗಳನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಸರ್ಕಾರ ನಡೆಸಲಿದೆ. ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಸರ್ಕಾರ ಕರೆದಿರುವ ವಿಶೇಷ ಸಂಸತ್ ಅಧಿವೇಶನದ ಬಗ್ಗೆ ನನಗೆ ತಿಳಿದಿಲ್ಲ. ನಾನು ಸಂಸದನಲ್ಲ ಎಂದು ಹೇಳಿದರು.