Home ಸುದ್ದಿ ರಾಷ್ಟ್ರೀಯ ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲು ಮಸೂದೆ:ಎನ್‌ಡಿಎಗೆ ೪೦ ಮತಗಳ ಕೊರತೆ

ಕ್ಷೇತ್ರ ಪುನರ್ವಿಂಗಡಣೆ, ಮಹಿಳಾ ಮೀಸಲು ಮಸೂದೆ:ಎನ್‌ಡಿಎಗೆ ೪೦ ಮತಗಳ ಕೊರತೆ

ನವದೆಹಲಿ, ನ.೨೭: ದೇಶದ ರಾಜಕೀಯ ವಲಯದಲ್ಲಿ ಮತ್ತೆ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಚಾರ ಮುನ್ನೆಲೆಗೆ ಬಂದಿದ್ದು, ಎನ್ ಡಿಎಗೆ ೪೦ ಮತಗಳ ಕೊರತೆ ಉಂಟಾಗಿದೆ.
ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿ ಕಲ್ಪಿಸುವ ಕಾನೂನಿನ ಅನುಷ್ಠಾನವನ್ನು ವೇಗಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸದಾಗಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.


೫೪೩ ಸದಸ್ಯ ಬಲದ ಲೋಕಸಭೆಯಲ್ಲಿ ಪ್ರಸ್ತುತ ಮೂರು ಸ್ಥಾನಗಳು ಖಾಲಿಯಿದ್ದು, ಒಟ್ಟು ೫೪೦ ಸದಸ್ಯರಿದ್ದಾರೆ. ಎಲ್ಲ ಸದಸ್ಯರು ಮತದಾನದಲ್ಲಿ ಪಾಲ್ಗೊಂಡರೆ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಕನಿಷ್ಠ ೩೬೦ ಮತಗಳ ಅಗತ್ಯವಿದೆ.


ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಳಿ ಸುಮಾರು ೩೨೦ ಸಂಸದರ ಬೆಂಬಲವಿದೆ. ಹೀಗಾಗಿ ಅಗತ್ಯವಿರುವ ೩೬೦ ಮತಗಳ ಗುರಿ ತಲುಪಲು ಇನ್ನೂ ೪೦ ಮತಗಳ ಕೊರತೆಯಿದೆ.
ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಸದನದ ಒಟ್ಟು ಸದಸ್ಯರ ಬಹುಮತ ಹಾಗೂ ಹಾಜರಿದ್ದು ಮತ ಚಲಾಯಿಸಿದ ಸದಸ್ಯರ ಪೈಕಿ ಮೂರನೇ ಎರಡರಷ್ಟು ಬೆಂಬಲ ಅಗತ್ಯ.
ಪ್ರಾದೇಶಿಕ ಪಕ್ಷಗಳ ಬೆಂಬಲ ನಿರ್ಣಾಯಕ
ಮಸೂದೆ ಅಂಗೀಕಾರಕ್ಕೆ ಡಿಎಂಕೆ, ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳ ನಿಲುವು ಮಹತ್ವ ಪಡೆದುಕೊಂಡಿದೆ.


೨೦೨೩ರಲ್ಲಿ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಕಾಯ್ದೆಯ ಪ್ರಕಾರ ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ಸ್ಥಾನಗಳನ್ನು ಮೀಸಲಿಡುವ ಉದ್ದೇಶವಿದೆ.


ಆದರೆ, ಈ ಮೀಸಲಾತಿ ಜಾರಿಗೆ ಜನಗಣತಿಯ ನಂತರ ಕ್ಷೇತ್ರ ಪುನರ್ವಿಂಗಡಣೆ ನಡೆಸುವ ಷರತ್ತು ವಿಧಿಸಲಾಗಿದೆ. ಈಗ ಸರ್ಕಾರ ಈ ಪ್ರಕ್ರಿಯೆಯನ್ನು ಮುಂದಕ್ಕೆ ತರುವ ಉದ್ದೇಶ ಹೊಂದಿದೆ ಎನ್ನಲಾಗಿದೆ.


ನವೆಂಬರ್ ೩೦ರಿಂದ ಸಂಸತ್ತಿನ ಕಲಾಪ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಪ್ರಕಟಣೆಯಂತೆ, ನವೆಂಬರ್ ೩೦ರಂದು ಲೋಕಸಭೆ ಹಾಗೂ ಡಿಸೆಂಬರ್ ೨ರಂದು ರಾಜ್ಯಸಭೆ ಕಲಾಪ ಪುನರಾರಂಭವಾಗಲಿದೆ. ಡಿಸೆಂಬರ್ ೩ರವರೆಗೆ ಕಲಾಪ ನಡೆಯುವ ಸಾಧ್ಯತೆಯಿದೆ.


ಆದರೆ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆಗಳ ಮಂಡನೆ ಕುರಿತು ಅಧಿಕೃತ ಕಾರ್ಯಸೂಚಿ ಇನ್ನೂ ಸ್ಪಷ್ಟವಾಗಿಲ್ಲ.


ಡಿಎಂಕೆ ೨೨ ಸಂಸದರು
ಎನ್‌ಸಿಪಿ (ಶರದ್ ಪವಾರ್ ಬಣ) ೮ ಸಂಸದರು
ವೈಎಸ್‌ಆರ್ ಕಾಂಗ್ರೆಸ್ ೪ ಸಂಸದರು