Home ಜಿಲ್ಲೆ ಕಲಬುರಗಿ ಐತೇಶಮ್ , ಪಾಂಡೆ ಮಾರಕ ಬೌಲಿಂಗ್: ಅಲ್-ಬರ್ಕಾತ್ 10 ವಿಕೆಟ್‍ಗಳ ಭರ್ಜರಿ ಜಯಸೆಮಿಫೈನಲ್ ಪ್ರವೇಶ

ಐತೇಶಮ್ , ಪಾಂಡೆ ಮಾರಕ ಬೌಲಿಂಗ್: ಅಲ್-ಬರ್ಕಾತ್ 10 ವಿಕೆಟ್‍ಗಳ ಭರ್ಜರಿ ಜಯಸೆಮಿಫೈನಲ್ ಪ್ರವೇಶ

ಕಲಬುರಗಿ: ಅಹ್ತೇಶಮ್ (30ಕ್ಕೆ 4) ಮತ್ತು ಆದಿತ್ಯ ಪಾಂಡೆ (15ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿ ಹಾಗೂ ಆರಂಭಿಕರಾದ ಇಶಾನ್ ಪಾಠಕ್ (ಅಜೇಯ 63) ಮತ್ತು ಯಜ್ಞೇಶ್ ಮೋರೆ (ಅಜೇಯ 32) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಲ್-ಬರ್ಕಾತ್ ಶಾಲೆ ತಂಡವು, ಇಲ್ಲಿನ ಸಂತ್ರಾಸ್‍ವಾಡಿಯ ಕೆಬಿಎನ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ‘ಕೆಬಿಎನ್ ಗೋಲ್ಡ್ ಕಪ್-2026’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗುರುವಾರ ಸ್ಯಾಮ್ ಕ್ರಿಕೆಟ್ ಅಕಾಡೆಮಿ ವಿರುದ್ಧ 10 ವಿಕೆಟ್‍ಗಳ ಏಕಪಕ್ಷೀಯ ಭರ್ಜರಿ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿತು.

ಮುಖ್ಯ ಅತಿಥಿ , ಕರ್ನಾಟಕ ಸಂಧ್ಯಾಕಾಲದ ನಿರ್ವಹಣ ನಿರ್ದೇಶಕರಾದ ಶಿವಲಿಂಗಪ್ಪಾ ದೊಡ್ಡಮನಿ ನಾಣ್ಯ ಚಿಮ್ಮಿಸಿದರು. ಟಾಸ್ ಗೆದ್ದ ಸ್ಯಾಮ್ ಕ್ರಿಕೆಟ್ ಅಕಾಡೆಮಿ ಮೊದಲು ಬ್ಯಾಟಿಂಗ್ ಮಾಡಿತು. ಸ್ಯಾಮ್ ಕ್ರಿಕೆಟ್ ಅಕಾಡೆಮಿ ತಂಡಕ್ಕೆ ಆರಂಭಿಕರಾದ ವ್ಯೋಮ್ ನಾಯ್ಡು ಮತ್ತು ಸಚಿತ್ ಶೆಟ್ಟಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 10 ಓವರ್‍ಗಳೊಳಗೆ 45 ರನ್‍ಗಳ ಜೊತೆಯಾಟವಾಡಿತು. ಆದರೆ, 36 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 29 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ವ್ಯೋಮ್ ನಾಯ್ಡು ಅವರನ್ನು ಅಥರ್ವ ಸಿಂಗ್ ಔಟ್ ಮಾಡುವ ಮೂಲಕ ಅಲ್-ಬರ್ಕಾತ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಈ ಜೊತೆಯಾಟ ಮುರಿಯುತ್ತಿದ್ದಂತೆಯೇ ಸ್ಯಾಮ್ ಕ್ರಿಕೆಟ್ ಅಕಾಡೆಮಿ ದಿಢೀರ್ ಬ್ಯಾಟಿಂಗ್ ಕುಸಿತ ಕಂಡಿತು. ನಿಖರ ದಾಳಿ ನಡೆಸಿದ ಆದಿತ್ಯ ಪಾಂಡೆ, ವಿಕೆಟ್ ಕೀಪರ್ ವಿಶ್ರುತ್ ಎಸ್ (6), ಕಿರಣ್ ರಾಥೋಡ್ (0) ಹಾಗೂ ತಾಳ್ಮೆಯ ಆಟವಾಡುತ್ತಿದ್ದ ಸಚಿತ್ ಶೆಟ್ಟಿ (40 ಎಸೆತಗಳಲ್ಲಿ 28 ರನ್, 3 ಬೌಂಡರಿ) ಅವರನ್ನು ಪೆವಿಲಿಯನ್‍ಗೆ ಅಟ್ಟಿದರು. ಇದರಿಂದ ತಂಡ 67 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮಧ್ಯಮ ಕ್ರಮಾಂಕದಲ್ಲಿ ಪರಿಣಿತ್ ಕೆ. ಗೌಡ (15) ಮತ್ತು ತನುಜ್ ಎಂ. (11) 5ನೇ ವಿಕೆಟ್‍ಗೆ 24 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದರು. ಆದರೆ, ದಾಳಿಗಿಳಿದ ಅಹ್ತೇಶಮ್ ಕೆಳಕ್ರಮಾಂಕದ ಬ್ಯಾಟರ್‍ಗಳನ್ನು ತರಗೆಲೆಗಳಂತೆ ಉದುರಿಸಿದರು. 25ನೇ ಓವರ್‍ನಲ್ಲಿ 4 ವಿಕೆಟ್‍ಗೆ 91 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಸ್ಯಾಮ್ ಅಕಾಡೆಮಿ, ಕೇವಲ 8 ರನ್‍ಗಳ ಅಂತರದಲ್ಲಿ ಕೊನೆಯ 6 ವಿಕೆಟ್‍ಗಳನ್ನು ಕಳೆದುಕೊಂಡು 28.3 ಓವರ್‍ಗಳಲ್ಲಿ 99 ರನ್‍ಗಳಿಗೆ ಆಲೌಟ್ ಆಯಿತು. ಹಾರ್ದಿಕ್ ಕುಮಾರ್ 7 ರನ್ ನೀಡಿ 2 ವಿಕೆಟ್ ಪಡೆದರು.

100 ರನ್‍ಗಳ ಸುಲಭ ಗುರಿ ಬೆನ್ನಟ್ಟಿದ ಅಲ್-ಬರ್ಕಾತ್ ಶಾಲೆ ತಂಡಕ್ಕೆ ಆರಂಭಿಕರು ಯಾವುದೇ ಆತಂಕವಿಲ್ಲದೆ ಗೆಲುವು ತಂದುಕೊಟ್ಟರು. ಆಕ್ರಮಣಕಾರಿ ಆಟವಾಡಿದ ಇಶಾನ್ ಪಾಠಕ್ ಕೇವಲ 37 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‍ಗಳ ನೆರವಿನಿಂದ ಅಜೇಯ 63 ರನ್ ಚಚ್ಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ಯಜ್ಞೇಶ್ ಮೋರೆ 24 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 32 ರನ್ ಗಳಿಸಿದರು. ಅಂತಿಮವಾಗಿ ಅಲ್-ಬರ್ಕಾತ್ ಶಾಲೆ ಕೇವಲ 10 ಓವರ್‍ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿ ಜಯಭೇರಿ ಬಾರಿಸಿತು.

ಕೆ ಐ ಒ ಸಿ ಬೆಂಗಳೂರು, ಸೋಶಿಯಲ್ ಕ್ರಿಕೆಟರ್ಸ್ ಬೆಂಗಳೂರು, ಪ್ರೆಸಿಡೆಂಟ್ xi, ಅಲ್ ಬರಕತ್ ಸ್ಕೂಲ ಸೆಮಿ ಫೈನಲ ಪ್ರವೇಶಿಸಿದವು.
ಮೊದಲ ಸೆಮಿಫೈನಲ್ 27 ನವೆಂಬದರ್ಂದು ಕೆ ಐ ಒ ಸಿ ಮತ್ತು ಅಲ್ ಬರಕತ್ ತಂಡಗಳ ನಡುವೆ ನಡೆಯಲಿದೆ.
ಪ್ರಶಸ್ತಿ ಸಮಾರಂಭದಲ್ಲಿ ಮುಖ್ಯ ಅತಿಥಿ ಕರ್ನಾಟಕ ಸಂಧ್ಯಾಕಾಲದ ವರದಿಗಾರತಿ ಅಸ್ಮಾ ಇನಾಮದಾರ ಕ್ರೀಡಾಪಟಗಳನ್ನು ತಮ್ಮ ಪ್ರೇರಣಾದಯಕ ಶಬ್ದಗಳ ಮೂಲಕ ಹುರಿದುಂಬಿಸಿದರು. ಐಹತೆಶ್ಯಾಮ ಪಂದ್ಯ ಪುರುಷ ಪಡೆದರು.