Home ಮುಖಪುಟ ಸುದ್ದಿ ಕೆಪಿಎಸ್‌ಸಿ ಅಕ್ರಮ ಸಿಸಿಟಿವಿ ಇಲ್ಲದೆಡೆ ಸಂದರ್ಶನ

ಕೆಪಿಎಸ್‌ಸಿ ಅಕ್ರಮ ಸಿಸಿಟಿವಿ ಇಲ್ಲದೆಡೆ ಸಂದರ್ಶನ

ಬೆಂಗಳೂರು, ನ.೧೯-ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ತನಿಖೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಲು ಸಿಸಿಟಿವಿ ಕ್ಯಾಮೆರಾಗಳಿಲ್ಲದ ಸ್ಥಳಗಳಲ್ಲಿ ಸಂದರ್ಶನ ನಡೆಸಲಾಗುತ್ತಿರುವುದು ಪತ್ತೆಯಾಗಿದೆ.


ಕೆಪಿಎಸ್‌ಸಿ ಮಾಜಿ ಸದಸ್ಯ ಗ್ಯಾನೇಂದ್ರ ಕುಮಾರ್ ಅವರು ಇಡಿ ಅಧಿಕಾರಿಗಳ ವಿಚಾರಣೆ ವೇಳೆ ನೀಡಿರುವ ಹೇಳಿಕೆಗಳು ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿವೆ. ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ನಡೆದ ಸಂದರ್ಶನದ ವೇಳೆ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಇರಲಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಸಿಸಿಟಿವಿ ಇಲ್ಲದ ಸ್ಥಳದಲ್ಲಿ ಸಂದರ್ಶನ ನಡೆಸಿದ ಕುರಿತು ಇಡಿ ಅಧಿಕಾರಿಗಳು ಪ್ರಶ್ನಿಸಿದಾಗ, “ಸಿಸಿಟಿವಿ ವ್ಯವಸ್ಥೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನೇ ಕೇಳಿ” ಎಂದು ಗ್ಯಾನೇಂದ್ರ ಕುಮಾರ್ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.


೧೫ ಕೋಟಿ ರೂ ಹಣ:


ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಬಸವರಾಜ್ ಕನ್ನಾಳೆ, ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಸುಮಾರು ೧೫ ಕೋಟಿ ರೂಪಾಯಿಯನ್ನು ಜಯಮಹಲ್‌ನಲ್ಲಿರುವ ಗ್ಯಾನೇಂದ್ರ ಕುಮಾರ್ ಅವರ ನಿವಾಸಕ್ಕೆ ತಲುಪಿಸಿರುವುದಾಗಿ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.


ಆದರೆ, ಈ ಆರೋಪವನ್ನು ನಿರಾಕರಿಸಿರುವ ಗ್ಯಾನೇಂದ್ರ ಕುಮಾರ್, ತಾನು ಕನ್ನಾಳೆಯಿಂದ ಯಾವುದೇ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ದೊಡ್ಡ ಮೊತ್ತದ ನಗದು ಜಮೆಯಾಗಿರುವುದು ಇಡಿ ತನಿಖೆಯಲ್ಲಿ ಪತ್ತೆಯಾಗಿದೆ.


ಕುಟುಂಬಸ್ಥರ ಖಾತೆಗಳಿಗೆ ೧೫,೩೯,೫೦೦ ರೂ. ಹಾಗೂ ೧೦,೯೪,೦೦೦ ರೂ. ನಗದು ಜಮೆಯಾಗಿರುವುದನ್ನು ತನಿಖಾ ಸಂಸ್ಥೆ ಗುರುತಿಸಿದೆ. ಈ ಹಣದ ಮೂಲದ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಗ್ಯಾನೇಂದ್ರ ಕುಮಾರ್ ಸಮರ್ಪಕ ಉತ್ತರ ನೀಡದೆ ಮೌನ ವಹಿಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.


ನೇಮಕಾತಿ ಅಕ್ರಮ:


ಕೆಪಿಎಸ್‌ಸಿ ನಡೆಸಿದ ಪಶುವೈದ್ಯಾಧಿಕಾರಿ, ಕಿರಿಯ ಎಂಜಿನಿಯರ್ ಸೇರಿದಂತೆ ವಿವಿಧ ಗೆಜೆಟೆಡ್ ಹಾಗೂ ತಾಂತ್ರಿಕ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.


ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಿ, ಕೋಟ್ಯಂತರ ರೂಪಾಯಿ ಲಂಚ ಪಡೆದು ಹುದ್ದೆಗಳನ್ನು ಮಾರಾಟ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿತ್ತು. ನೇಮಕಾತಿ ಅಕ್ರಮದ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.


ತನಿಖೆಯ ವೇಳೆ ಮಧ್ಯವರ್ತಿ ಬಸವರಾಜ್ ಕನ್ನಾಳೆ ಮತ್ತು ಕೆಪಿಎಸ್‌ಸಿ ಮಾಜಿ ಸದಸ್ಯ ಗ್ಯಾನೇಂದ್ರ ಕುಮಾರ್ ನಡುವಿನ ಹಣಕಾಸಿನ ವ್ಯವಹಾರಗಳು ಹಾಗೂ ಸಂದರ್ಶನ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಹಲವು ಅಂಶಗಳು ಬಹಿರಂಗವಾಗಿವೆ. ಪ್ರಕರಣದ ಮುಂದಿನ ತನಿಖೆ ಮಹತ್ವ ಪಡೆದುಕೊಂಡಿದೆ.