
ಕಲಬುರಗಿ,ಆ.1-ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವತಿಯಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯರಾದ ಗೋವಿಂದ ರೆಡ್ಡಿ, ಐಎಎಸ್ ಅವರೊಂದಿಗೆ ಸಂವಾದ ಕಾರ್ಯಕ್ರಮವು ಜುಲೈ 30ರಂದು ಕಲಬುರಗಿಯ ಕೆಕೆಸಿಸಿಐ ಎಸ್.ಎಸ್.ಪಾಟೀಲ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಅವರು, ಕಲ್ಯಾಣ ಕರ್ನಾಟಕದ ಗುರ್ಮಿಟ್ಕಲ್ ತಾಲ್ಲೂಕಿನವರಾದ ಗೋವಿಂದ ರೆಡ್ಡಿ ಅವರು
ತಮ್ಮ ಹಿಂದಿನ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ರಾಜ್ಯಾದ್ಯಂತ ಉತ್ತಮ ಆಡಳಿತಾಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅವರ ನಾಯಕತ್ವದಲ್ಲಿ ಕೆಐಎಡಿಬಿ ಮೂಲಕ ಕಲ್ಯಾಣ
ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪ್ರದೇಶದಲ್ಲಿ ಕೈಗಾರಿಕಾ ಭೂಮಿ, ಮೂಲಸೌಕರ್ಯ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಇನ್ನೂ ಬಗೆಹರಿಯಬೇಕಾಗಿದ್ದು, ಅವುಗಳ ಕುರಿತು ನೇರವಾಗಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಲು ಚೇಂಬರ್‍ಗೆ ಆಗಮಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಲಕ್ಷ ಉದ್ಯೋಗಗಳ ಸೃಷ್ಟಿ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಯೋಜನೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಕೆಸಿಸಿಐ ವತಿಯಿಂದ ಗೋವಿಂದ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕೆಐಎಡಿಬಿ ಅಧೀಕ್ಷಕ ಅಭಿಯಂತರ ಟಿ.ಎಸ್. ಲಕ್ಷ್ಮೀಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಹಾಗೂ ಎಂಎಸ್‍ಎಂಇ ಸಮಿತಿಯ ಚೇರ್‍ಮನ್ ಅಭಿಜಿತ್ ಪಡಶೆಟ್ಟಿ ಉಪಸ್ಥಿತರಿದ್ದರು.
ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಅವರು ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಎಫ್‍ಕೆಸಿಸಿಐ-ಕೆಐಎಡಿಬಿ ಸಂವಾದ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ವಿವಿಧ ಸಮಸ್ಯೆಗಳ ಕುರಿತು ಮತ್ತೊಮ್ಮೆ ಕೆಐಎಡಿಬಿ ಸಿಇಒ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಕೆಕೆಸಿಸಿಐ ವತಿಯಿಂದ ಸಲ್ಲಿಸಲಾದ ಮನವಿಪತ್ರದ ಅಂಶಗಳನ್ನು ವಿವರಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಶೀಘ್ರ ಪರಿಹಾರಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೆ-ಲ್ಯಾಂಪ್, ಕಪನೂರು ಕೈಗಾರಿಕಾ ಪ್ರದೇಶ ಸಂಘ ಸೇರಿದಂತೆ ವಿವಿಧ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಕೈಗಾರಿಕಾ ಭೂ ಹಂಚಿಕೆ, ಮೂಲಸೌಕರ್ಯ ಅಭಿವೃದ್ಧಿ, ನೀರು ಪೂರೈಕೆ, ದಾಖಲೆಗಳ ಪರಿಶೀಲನೆಯಲ್ಲಿನ ವಿಳಂಬ,ಕೈಗಾರಿಕಾ ವಿಸ್ತರಣೆ ಹಾಗೂ ಕೆಐಎಡಿಬಿಯ ವಿವಿಧ ನೀತಿಗಳ ಕುರಿತು ಪ್ರಶ್ನೆಗಳು ಮತ್ತು ಸಲಹೆಗಳನ್ನು ಮಂಡಿಸಿದರು.
ಪ್ರತಿಕ್ರಿಯಿಸಿದ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಅವರು, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಅವರು ನೀಡಿದ್ದ ಆಹ್ವಾನವನ್ನು ಸ್ಮರಿಸಿದರು. ನಾನು ಎಸ್.ಬಿ. ಶಿಕ್ಷಣ
ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ನನ್ನ ಆಡಳಿತಾತ್ಮಕ ಜೀವನದಲ್ಲಿ ಕೆಕೆಸಿಸಿಐಗೆ ಇದು ನಾಲ್ಕನೇ ಭೇಟಿ ಎಂದು ತಿಳಿಸಿದರು.
ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಕುರಿತು ಮಾತನಾಡಿದ ಅವರು, ಯೋಜನೆಯ ಅಭಿವೃದ್ಧಿ ಕಾಮಗಾರಿ ಈಗಾಗಲೇ
ಆರಂಭವಾಗಿದ್ದು, ಭೂ ಅಭಿವೃದ್ಧಿಗಾಗಿ ಸುಮಾರು 350 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು. ಪ್ರತಿ ಎಕರೆ ಭೂಮಿಯ ಬೆಲೆ ಸುಮಾರು 49 ಲಕ್ಷ ಆಗುವ ನಿರೀಕ್ಷೆಯಿದೆ ಎಂದರು. ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು. ವಿವರವಾದಯೋಜನಾ ವರದಿ (ಡಿಪಿಆರ್) ಅನುಮೋದನೆಗೊಂಡು ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಅಭಿವೃದ್ಧಿಪಡಿಸಿದ ಪಾರ್ಕ್ ಅನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ನಂದೂರು ಕೈಗಾರಿಕಾ ಪ್ರದೇಶ ಮೂರನೇ ಹಂತದ ಭೂ ಹಂಚಿಕೆ ಪ್ರಕ್ರಿಯೆಯು ಮುಂದಿನ ಐದರಿಂದ ಆರು ತಿಂಗಳೊಳಗೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಕೆ-ಲ್ಯಾಂಪ್ ಮಹಿಳಾ ಕೈಗಾರಿಕಾ ಪಾರ್ಕ್ ಕುರಿತು ಮಾತನಾಡಿದ ಅವರು, ಬೀದಿ ದೀಪಗಳು, ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆಯು ಸರ್ಕಾರದ ಪರಿಶೀಲನೆಯಲ್ಲಿದ್ದು, ಅಗತ್ಯ ಅನುಮೋದನೆ ದೊರೆತ ಬಳಿಕ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದರು.
ದಾಖಲೆಗಳ ಪರಿಶೀಲನೆ ಮತ್ತು ಅನುಮೋದನೆಯಲ್ಲಿನ ವಿಳಂಬ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರವು ಇಲಾಖೆಗಳಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಅನುಮೋದನಾ ಪ್ರಕ್ರಿಯೆ ವೇಗವಾಗಲಿದೆ ಎಂದು ಹೇಳಿದರು. ಕೈಗಾರಿಕಾ ಪ್ರದೇಶಗಳಲ್ಲಿ ಇ-ಸ್ವತ್ತು ವ್ಯವಸ್ಥೆಯ ಅನುಷ್ಠಾನ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಗುಲ್ಬರ್ಗಾ ಟೆಕ್ಸ್ಟೈಲ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‍ಗೆ ಸಂಬಂಧಿಸಿದ ಭೂ ಹಂಚಿಕೆ ಹಾಗೂ ಅವಧಿ ವಿಸ್ತರಣೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೈಗಾರಿಕಾ ಪ್ರದೇಶಗಳಲ್ಲಿ ಪೆÇಲೀಸ್ ಠಾಣೆ, ಅಗ್ನಿಶಾಮಕ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವಂತೆ ಕೈಗಾರಿಕೋದ್ಯಮಿಗಳು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಗೋವಿಂದ ರೆಡ್ಡಿ ಅವರು,
ಸಂಬಂಧಪಟ್ಟ ಇಲಾಖೆಗಳು ಪ್ರಸ್ತಾವನೆ ಸಲ್ಲಿಸಿದಲ್ಲಿ ಕೆಐಎಡಿಬಿ ಉಚಿತವಾಗಿ ಭೂಮಿ ಒದಗಿಸಲು ಸಿದ್ಧವಿದೆ ಎಂದು ತಿಳಿಸಿದರು.
ಸೆಕ್ಷನ್ 34(ಬಿ) ಅಡಿಯಲ್ಲಿ ನೀಡಲಾಗಿರುವ ನೋಟಿಸ್‍ಗಳ ಕುರಿತು ಮಾತನಾಡಿದ ಅವರು, ಹಿಂದುಳಿದ ಪ್ರದೇಶವಾಗಿರುವುದರಿಂದ ಕೆಐಎಡಿಬಿ ಉದಾರ ಧೋರಣೆ ಅನುಸರಿಸುತ್ತಿದ್ದು, ಅರ್ಹರಿಗೆ ಈಗಾಗಲೇ ಅವಧಿ ವಿಸ್ತರಣೆ ನೀಡಲಾಗಿದೆ ಎಂದು ಹೇಳಿದರು. ಆದರೆ, ನೀಡಿರುವ ಅವಕಾಶವನ್ನು ಕೈಗಾರಿಕೋದ್ಯಮಿಗಳು ನಿಯಮಾನುಸಾರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೈಗಾರಿಕಾ ಪ್ರದೇಶಗಳ ಬಫರ್ ವಲಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾದ ಎಲ್ಲ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಕೆಕೆಸಿಸಿಐಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆ-ಲ್ಯಾಂಪ್ ಪ್ರತಿನಿಧಿಗಳಾದ ಮುಕ್ತಾ ಜೆಗರಕಲ್ ಮತ್ತು ಅನ್ನಪೂರ್ಣಾ ಹೊಗಾಡೆ, ಕಪನೂರು ಕೈಗಾರಿಕಾ ಪ್ರದೇಶ ಸಂಘದ ಪ್ರತಿನಿಧಿಗಳಾದ ರವೀಂದ್ರ ಮುಕ್ಕಾ, ಬಸವರಾಜ ಜೋಗೂರ ಹಾಗೂ ರವೀಂದ್ರ ಮಾದಂಶೆಟ್ಟಿ ಹಾಗೂ ಸುಭಾಷ ಕಮಲಾಪುರ, ಕೈಗಾರಿಕೋದ್ಯಮಿಗಳಾದ ಅಜಯ್ ಮದಗುಂಕಿ, ಭೀಮರಾವ್ ಪಾಟೀಲ ದಂಗಾಪುರ, ಶರಣಬಸಪ್ಪ ಮಚ್ಚೆಟ್ಟಿ, ಹನುಮಂತರಾಯ ತೋಟ್ನಳ್ಳಿ, ಸಂತೋಷ್ ನಂದ್ಯಾಳ, ಭೀಮಾಶಂಕರ ಕಲಶೆಟ್ಟಿ, ನಾಗೇಶ್ ಪಾಟೀಲ, ಅಬ್ದುಲ್ ಸಲೀಂ ಹಾಗೂ ಹಸನುದ್ದೀನ್ ಅವರು ವಿವಿಧ ಪ್ರಶ್ನೆಗಳು ಹಾಗೂ ಸಲಹೆಗಳನ್ನು ಮಂಡಿಸಿದರು.
ಕೆಕೆಸಿಸಿಐ ಜಂಟಿ ಕಾರ್ಯದರ್ಶಿ ಗಿರೀಶ್ ಅನಕಲ್, ಖಜಾಂಚಿ ಉತ್ತಮ್ ಬಜಾಜ್, ಕಾರ್ಯಕಾರ ಸಮಿತಿಯ ಸದಸ್ಯರಾದ ರವೀಶಂಕರ್ ಜಮದಾರಖಾನಿ, ಅನುದೀಪ್ ದಂಡೋತಿ ಹಾಗೂ ಸಂತೋಷ್ ಸುರೇಶ್ ನಂದ್ಯಾಳ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರವೀಶಂಕರ್ ಜಮದಾರಖಾನಿ ನಿರೂಪಿಸಿದರು. ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ವಂದಿಸಿದರು.





























