
ಬೆಂಗಳೂರು, ಅ.೧೮: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೧೦೦೦ ಗ್ರಾಮೀಣ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವಿಬಿಜಿ ರಾಮ್ ಜಿ ಅಡಿ ಯೋಜನೆ ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ತತ್ಸಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಹಾಗೂ ವಿಬಿಜಿ ರಾಮ್ ಜಿ ಆಯುಕ್ತರಿಗೆ ಲಿಖಿತ ಸೂಚನೆ ನೀಡಿರುವ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರ ಆಗಮನ, ನಿರ್ಗಮನ ಇರುವ ೧೦೦೦ ಹಳ್ಳಿಗಳ ಬಸ್ ತಂಗುದಾಣಗಳನ್ನು ಗುರುತಿಸಿ, ಗ್ರಾಮೀಣ ಸೊಗಡಿನ ಹಾಗೂ ಸ್ಥಳೀಯ ಹಿರಿಮೆ ಬಿಂಬಿಸುವಂತಹ ವಿನ್ಯಾಸ ರೂಪಿಸಿ, ಅದಕ್ಕೆ ಆಗುವ ಸಾಮಗ್ರಿ ವೆಚ್ಚ ಮತ್ತು ವಿಬಿಜಿ ರಾಮ್ ಜಿ ಕೂಲಿಯ ವೆಚ್ಚವನ್ನು ಅಂದಾಜು ಮಾಡಿ ೧೫ ದಿನಗಳ ಒಳಗಾಗಿ ಪ್ರಸ್ತಾವನೆಯನ್ನು ಕಡತದಲ್ಲಿ ಸಲ್ಲಿಸಲು ಸೂಚಿಸಿದ್ದಾರೆ.
ರಾಜ್ಯದ ೫೯೨೭ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯವಿದ್ದರೂ, ಬಸ್ ನಿಲುಗಡೆಯ ಜಾಗದಲ್ಲಿ ತಂಗುದಾಣಗಳು ಇಲ್ಲದ ಕಾರಣ ಸಾರ್ವಜನಿಕರು, ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿದೆ ಹಾಗೂ ಮತ್ತೆ ಕೆಲವು ಬಸ್ ತಂಗು ದಾಣಗಳು ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈಶ್ವರ ಖಂಡ್ರೆ ಈ ಸೂಚನೆ ನೀಡಿದ್ದಾರೆ.
ವಿಬಿಜಿ ರಾಮ್ ಜಿ ಅಡಿಯಲ್ಲಿ ಬಸ್ ತಂಗುದಾಣಗಳನ್ನು ಹೊಸದಾಗಿ ನಿರ್ಮಿಸಲು ಮತ್ತು ಹಳೆಯ ತಂಗುದಾಣಗಳನ್ನು ನಿರ್ವಹಣೆ ಮಾಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸುವಂತೆ ಈ ಮೂಲಕ ಅಕುಶಲ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಅವರು ನಿರ್ದೇಶನ ನೀಡಿದ್ದಾರೆ.

























