Home ಜಿಲ್ಲೆ ಬೆಂಗಳೂರು ನಾಮಫಲಕ ಅಳವಡಿಕೆ ಕಾರ್ಯಕ್ಕೆ ಕೆ.ಶೇಷಾದ್ರಿ ಚಾಲನೆ

ನಾಮಫಲಕ ಅಳವಡಿಕೆ ಕಾರ್ಯಕ್ಕೆ ಕೆ.ಶೇಷಾದ್ರಿ ಚಾಲನೆ

ರಾಮನಗರ,ಜು.೨೯: ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕರು ಸುಲಭವಾಗಿ ಬಡಾವಣೆ ಬೀದಿ ರಸ್ತೆ ಗುರುತಿಸುವಿಕೆ ದೃಷ್ಟಿಯಿಂದ ಬಡಾವಣೆಗಳಲ್ಲಿನ ರಸ್ತೆ, ಬೀದಿಗಳಿಗೆ ನಾಮಫಲಕ ಅಳವಡಿಕೆ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.


ನಗರದ ವಿವೇಕಾನಂದ ಬಡಾವಣೆ ಯಲ್ಲಿ ನೂತನವಾಗಿ ರಸ್ತೆ ನಾಮಫಲಕಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,ನಾಮಫಲಕ ಅಳವಡಿಕೆ ಸಂಬಂಧ ನಗರಸಭೆಯ ೨೦೨೬-೨೭ನೇ ಆಯವ್ಯಯದಲ್ಲಿ ಘೋಷಿಸಲಾಗಿತ್ತು.ಬಜಟ್‌ನ ಘೋಷಣೆಯಂತೆ ಇಂದು ನಗರದ ವಿವಿಧ ಬಡಾವಣೆಗಳಲ್ಲಿ ನಾಮಫಲಕ ಅಳವಡಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.


ಎಲ್ಲಾ ವಾರ್ಡ್‌ಗಳಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ರಸ್ತೆ ನಾಮಫಲಕಗಳನ್ನು ಅಳವಡಿಸಲಾಗುವುದು.ಇದಕ್ಕೆ ಟೆಂಡರ್ ಕರೆದು ಕೆಲಸದ ಆದೇಶ ಪತ್ರವನ್ನು ನೀಡಲಾಗಿದೆ.ಆದಷ್ಟು ಶೀಘ್ರವಾಗಿ ಈ ಕೆಲಸವು ಮುಗಿಸಲಾಗುತ್ತದೆ.ನಾಮಫಲಕ ಅಳವಡಿಕೆಯಿಂದ ನಗರದ ಸೌಂದರ್ಯ ಹೆಚ್ಚುವುದಲ್ಲದೆ,ನಾಗರೀಕರು ಹಾಗೂ ಪರಸ್ಥಳದಿಂದ ಬರುವ ಸಾರ್ವಜನಿಕರಿಗೆ ರಸ್ತೆ, ಬಡಾವಣೆಗಳ ಮಾಹಿತಿ ಸುಲಭವಾಗಿ ದೊರಕುತ್ತದೆ ಎಂದು ತಿಳಿಸಿದರು.


ತ್ಯಾಜ್ಯದ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು,ಈಗಾಗಲೇ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಎಲ್ಲೆಂದರಲ್ಲಿ ಕಸ ಬಿಸಾಡದಂತೆ ಕ್ರಮ ವಹಿಸಲಾಗಿದೆ. ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನಗರಸಭೆ ಹಾಗೂ ಪೌರಕಾರ್ಮಿಕರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಕೆಲ ನಾಗರಿಕರು ಆಟೋಗಳಿಗೆ ತ್ಯಾಜ್ಯವನ್ನು ನೀಡದೆ ರಾತ್ರಿ ವೇಳೆ ಖಾಲಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡಿ ಹೋಗುತ್ತಿದ್ದಾರೆ. ನಗರದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ನಗರವಾಸಿಗಳ ಸಹಕಾರ ಅತ್ಯಗತ್ಯವಾಗಿದ್ದು, ಎಲ್ಲೆಂದ ರಲ್ಲಿ ಕಸ ಬಿಸಾಡದಂತೆ ಅರಿವು ನಾಗರಿಕರಲ್ಲಿ ಮೂಡಬೇಕಿದೆ ಎಂದರು.


ಈ ಸಂದರ್ಭದಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಕೆ.ರಾಜು, ನಗರಸಭೆ ಆಯುಕ್ತ ಡಾ.ಜಯಣ್ಣ, ಸದಸ್ಯೆ ಪವಿತ್ರ ಲಕ್ಷ್ಮೀಕಾಂತ್ ಮಾಜಿ ಅಧ್ಯಕ್ಷ ಲೋಹಿತ್‌ಬಾಬು, ಮುಖಂಡರಾದ ಗಂಗಾಧರಗೌಡ, ಲಕ್ಷ್ಮೀಕಾಂತ್, ಗುಂಡಣ್ಣ ಮತ್ತಿತರರು ಇದ್ದರು.