
ಯಾದಗಿರಿ:ಮೇ.೨೦: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಸತತ ಎರಡನೇ ಬಾರಿಗೆ ಆಯ್ಕೆಯಾಗಿ ಸಂಘದ ಆಡಳಿತ ಚುಕ್ಕಾಣಿ ಹಿಡಿದಿರುವ ಹಿರಿಯ ಪತ್ರಕರ್ತ ಮಲ್ಲಪ್ಪ ಸಂಕೀನ್ ಅವರಿಗೆ ಜಿಲ್ಲಾ ಕೋಲಿ ಮತ್ತು ಕಬ್ಬಲಿಗ ಸಮಾಜದ ವತಿಯಿಂದ ನಗರದಲ್ಲಿ ಆತ್ಮೀಯ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೋಸಿ ಅವರ ನೇತೃತ್ವದಲ್ಲಿ ಶಾಲು ಹೊದಿಸಿ, ಪುಷ್ಪಹಾರ ಸಮರ್ಪಿಸಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಪ್ಪ ಸಂಕೀನ್, “ಸಮಾಜದಲ್ಲಿ ಪತ್ರಕರ್ತರ ಮೇಲೆ ಅಪಾರ ಜವಾಬ್ದಾರಿ ಇದೆ. ಜನರು ಮಾಧ್ಯಮಗಳ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಸಮಾಜಮುಖಿ ಧೋರಣೆಯೊಂದಿಗೆ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬ ಪತ್ರಕರ್ತನ ಕರ್ತವ್ಯವಾಗಿದೆ” ಎಂದು ಹೇಳಿದರು.
“ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದ ಮೇಲೆ ಜನರು ನಂಬಿಕೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಪತ್ರಕರ್ತರು ಅತ್ಯಂತ ಎಚ್ಚರಿಕೆ, ನೈತಿಕತೆ ಹಾಗೂ ವೃತ್ತಿಪರ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಅಗತ್ಯವಿದೆ. ಧ್ವನಿಯಿಲ್ಲದವರ ಧ್ವನಿಯಾಗಿ, ಸಮಾಜದ ಸಮಸ್ಯೆಗಳನ್ನು ಜನರ ಮುಂದಿಡುವುದು ಪತ್ರಕರ್ತರ ನಿಜವಾದ ಜವಾಬ್ದಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಗೋಸಿ, “ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದಲ್ಲಿನ ಅನ್ಯಾಯ, ಅಕ್ರಮ ಹಾಗೂ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಬದಲಾವಣೆಗೆ ಮಾಧ್ಯಮಗಳು ಶಕ್ತಿಯಾಗಿವೆ” ಎಂದು ಹೇಳಿದರು.
“ಕಳೆದ ಒಂದು ದಶಕಕ್ಕೂ ಅಧಿಕ ಅವಧಿಯಿಂದ ಜಿಲ್ಲೆಯ ಮಾಧ್ಯಮ ಕ್ಷೇತ್ರದಲ್ಲಿ ಮಲ್ಲಪ್ಪ ಸಂಕೀನ್ ಅವರು ಪ್ರಾಮಾಣಿಕತೆ, ನಿಷ್ಠೆ ಹಾಗೂ ವೃತ್ತಿಪರ ಬದ್ಧತೆಯಿಂದ ಸೇವೆ ಸಲ್ಲಿಸುತ್ತಿದ್ದು, ಖಡಕ್ ಮತ್ತು ನಿಷ್ಪಕ್ಷಪಾತ ಪತ್ರಕರ್ತರಾಗಿ ಜನಮನ್ನಣೆ ಗಳಿಸಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭೀಮರಡ್ಡಿ, ನಿಂಗಪ್ಪ ಜಾಲಗಾರ, ಶರಣು ಪಟೇದಾರ ಆಶನಾಳ, ಮಲ್ಲು ಪೂಜಾರಿ, ಬಸವರಾಜ ಕೊಲ್ಲೂರು, ಮುದುಕಪ್ಪ ಚಾಮನಾಳ, ದೇವೇಂದ್ರಪ್ಪ ಪಸ್ಪುಲ್, ಮಹೇಶ್ ಕುಮಾರ್ ಬಾಡಿಹಾಳ, ಅಯ್ಯಾ ನಾಯ್ಕೋಡಿ ಸೇರಿದಂತೆ ಅನೇಕ ಮುಖಂಡರು, ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.





















