
ಯಾದಗಿರಿ: ಮೇ.೨೦:ಗೋಪಾಳಪುರ ಗ್ರಾಮದಲ್ಲಿ ದಾಖಲಾಗಿರುವ ಎಸ್ಸಿ-ಎಸ್ಟಿ ಕಾಯ್ದೆ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರಿಸುತ್ತಿದೆ ಎಂಬ ಆರೋಪದ ನಡುವೆಯೇ, ದೂರುದಾರ ಆನಂದ್ ಭಜಂತ್ರಿ ಅವರ ಸ್ನೇಹಿತ ಮರ್ಲಿಂಗಪ್ಪ ಪೂಜಾರಿ ವಿರುದ್ಧವೂ ಕೌಂಟರ್ ಪ್ರಕರಣ ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಗ್ರಾಮದ ನಿವಾಸಿ ಆನಂದ್ ಭಜಂತ್ರಿ ಮಾತನಾಡಿ, “೨೦೨೬ರ ಏಪ್ರಿಲ್ ೬ರಂದು ಗ್ರಾಮದ ಕೆಲ ಮೇಲ್ವರ್ಗದ ವ್ಯಕ್ತಿಗಳು ನಮ್ಮ ಕುಟುಂಬದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಕುರಿತು ದೂರು ನೀಡಿದರೂ ಇದುವರೆಗೂ ಆರೋಪಿಗಳ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ. ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ” ಎಂದು ಆರೋಪಿಸಿದರು.
ಇದೇ ವೇಳೆ, ಆನಂದ್ ಭಜಂತ್ರಿ ಅವರ ಸ್ನೇಹಿತ ಮರ್ಲಿಂಗಪ್ಪ ಪೂಜಾರಿ ವಿರುದ್ಧ ಹಲ್ಲೆ ಆರೋಪದಡಿ ಕೌಂಟರ್ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಬಂಧಿಸದಿರಲು ಹಾಗೂ ‘ಬಿ’ ರಿಪೋರ್ಟ್ ಸಲ್ಲಿಸಲು ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀರಣ್ಣ ದೊಡ್ಡಮನಿ ಅವರು ?೨ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಸಂಬAಧ ಮುಂಗಡವಾಗಿ ?೧ ಲಕ್ಷ ಸ್ವೀಕರಿಸುತ್ತಿದ್ದ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದರು. ಲೋಕಾಯುಕ್ತ ಡಿವೈಎಸ್ಪಿ ಜಾಕೀರ್ ಇನಾಂದಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಪ್ರತಿಯೊಂದು ಹಂತದಲ್ಲಿಯೂ ಹಣದ ಬೇಡಿಕೆ ಇಟ್ಟು ಮಾನಸಿಕ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ದೂರಿದ ಆನಂದ್ ಭಜಂತ್ರಿ, “ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ನಮ್ಮ ಕುಟುಂಬದ ಮೇಲೆ ನಿರಂತರ ಒತ್ತಡ ಸೃಷ್ಟಿಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಮನೆಯ ಮುಂದೆ ಅಪರಿಚಿತರು ಬೈಕ್ ಹಾಗೂ ವಾಹನಗಳಲ್ಲಿ ಬಂದು ಹೋಗುತ್ತಿದ್ದು, ಗ್ರಾಮದಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಗಂಭೀರ ಆರೋಪಗಳು ಕೇಳಿಬರುತ್ತಿದ್ದರೂ ಪೊಲೀಸ್ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದ ಅವರು, ಪ್ರಕರಣವನ್ನು ಉನ್ನತ ಮಟ್ಟದ ಅಧಿಕಾರಿಗಳಿಂದ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ತಮ್ಮ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಇದೀಗ ಪ್ರಕರಣದ ಗಂಭೀರತೆಯನ್ನು ಮನಗಂಡು ಪೊಲೀಸ್ ಇಲಾಖೆ ದೂರುದಾರ ಕುಟುಂಬದ ನೆರವಿಗೆ ನಿಂತು ಭದ್ರತೆ ಒದಗಿಸುವ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.





















