Home ಜಿಲ್ಲೆ ಆರ್. ಹೊಸಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ ಯಶಸ್ವಿ

ಆರ್. ಹೊಸಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ ಯಶಸ್ವಿ

ಯಾದಗಿರಿ:ಮೇ.೨೦: ಯಾದಗಿರಿ ತಾಲ್ಲೂಕಿನ ಆರ್. ಹೊಸಳ್ಳಿ ಗ್ರಾಮದಲ್ಲಿ ಡಾನ್ ಬೋಸ್ಕೊ ಸಮಾಜ ಸೇವಾ ಕೇಂದ್ರ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಡಾನ್ ಬೋಸ್ಕೊ ಮೊಬೈಲ್ ಕ್ಲಿನಿಕ್ ತಂಡವು ಸೈದಾಪುರ ಸರ್ಕಾರಿ ಆಸ್ಪತ್ರೆಯ ಎನ್‌ಸಿಡಿ ಸಿಬ್ಬಂದಿಗಳ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಿತು.

ಹನುಮಾನ್ ದೇವಸ್ಥಾನದ ಸಮೀಪ ನಡೆದ ಕಾರ್ಯಕ್ರಮಕ್ಕೆ ಡಾನ್ ಬೋಸ್ಕೊ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಫಾದರ್ ಶಾಬು ಫ್ರಾನ್ಸಿಸ್ ನೇತೃತ್ವ ವಹಿಸಿದ್ದರು. ಮೊಬೈಲ್ ಕ್ಲಿನಿಕ್ ಸಿಬ್ಬಂದಿಗಳಾದ ಸಿದ್ದಮ್ಮ (ಸ್ಟಾಫ್ ನರ್ಸ್), ಆರೋಗ್ಯ ಕಾರ್ಯಕರ್ತರಾದ ಮರೆಮ್ಮ ಹಾಗೂ ಬಸವರಾಜ ಅವರು ಶಿಬಿರವನ್ನು ಸಮರ್ಪಕವಾಗಿ ನಿರ್ವಹಿಸಿದರು.

ಇದೇ ವೇಳೆ ಸೈದಾಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳಾದ ಮಿಶಾಲ್ (ಲ್ಯಾಬ್ ತಾಂತ್ರಿಕ ತಜ್ಞ) ಮತ್ತು ಎನ್‌ಸಿಡಿ ಕೌನ್ಸಿಲರ್ ನಾಗೇಂದ್ರ ಸರ್ ಭಾಗವಹಿಸಿ ಗ್ರಾಮಸ್ಥರಿಗೆ ಆರೋಗ್ಯ ಸೇವೆ ಒದಗಿಸಿದರು. ಶಿಬಿರದಲ್ಲಿ ಒಟ್ಟು ೬೪ ಜನರು ಪಾಲ್ಗೊಂಡಿದ್ದು, ಇವರಲ್ಲಿ ೩೬ ಪುರುಷರು, ೨೭ ಮಹಿಳೆಯರು ಹಾಗೂ ಒಂದು ಮಗು ಸೇರಿದ್ದರು.

ಭಾಗವಹಿಸಿದವರಿಗೆ ಉಚಿತವಾಗಿ ರಕ್ತದೊತ್ತಡ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆಗಳನ್ನು ನಡೆಸಲಾಯಿತು. ಅಗತ್ಯವಿರುವವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ನಾಗೇಂದ್ರ ಸರ್ ಕೌನ್ಸಿಲಿಂಗ್ ನೀಡಿ, ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಹಾಗೂ ಔಷಧ ಸೇವನೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

ಗ್ರಾಮದ ಆಶಾ ಕಾರ್ಯಕರ್ತೆಯರಾದ ರಾಮಲಿಂಗಮ್ಮ ಮತ್ತು ಸಾಬಮ್ಮ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಶಿಬಿರದ ಮೂಲಕ ಗ್ರಾಮಸ್ಥರಲ್ಲಿ ಮಧುಮೇಹ, ರಕ್ತದೊತ್ತಡ ಸೇರಿದಂತೆ ಅಸಂಕ್ರಾಮಕ ರೋಗಗಳ ಕುರಿತು ಅರಿವು ಮೂಡಿದ್ದು, ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ಸೌಲಭ್ಯ ದೊರೆತ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.