Home ಜಿಲ್ಲೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪೇಪರ್‌ನಲ್ಲಿ ಜನರ ಬದುಕು ಮಾತ್ರ ಕತ್ತಲಲ್ಲಿ: ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜಪ್ಪಗೌಡ...

ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಪೇಪರ್‌ನಲ್ಲಿ ಜನರ ಬದುಕು ಮಾತ್ರ ಕತ್ತಲಲ್ಲಿ: ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ

ಯಾದಗಿರಿ:ಮೇ.೨೦: ರಾಜ್ಯ ಸರ್ಕಾರದ ಮೂರು ವರ್ಷದ ಆಡಳಿತವು ಸಾಧನೆಯ ಅವಧಿಯಲ್ಲ, ಬದಲಾಗಿ “ಮುನ್ನೂರು ವೈಫಲ್ಯಗಳ ಮಾಲಾರ್ಪಣೆ”ಯಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ತೀವ್ರ ವಾಗ್ದಾಳಿ ನಡೆಸಿದರು. ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸಮಾವೇಶಗಳ ಹೆಸರಿನಲ್ಲಿ ಜನರನ್ನು ತಪ್ಪುದಾರಿಗೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಸಂಕಷ್ಟದಲ್ಲಿದ್ದರೂ ಸರ್ಕಾರ ಸಮರ್ಪಕ ನೆರವು ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು. ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹಧನ ಬಾಕಿಯಿದ್ದು, ಕೃಷಿ ವೆಚ್ಚಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ರೈತರ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸರ್ಕಾರ ಸ್ಪಂದನೆ ತೋರದೇ ರಾಜಕೀಯ ಸಮಾವೇಶಗಳಲ್ಲಿ ನಿರತರಾಗಿದೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ನೀಡುತ್ತಿರುವ ರಸಗೊಬ್ಬರಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಕೇಂದ್ರದ ಕಿಸಾನ್ ಸನ್ಮಾನ್ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಆರೋಪಿಸಿದರು. ನೀರು, ವಿದ್ಯುತ್, ಭೂ ನೋಂದಣಿ ಸೇರಿದಂತೆ ಬಹುತೇಕ ಸೇವೆಗಳ ದರ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ತರವಾಗಿದೆ ಎಂದರು.

“ಗ್ಯಾರAಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರುಳು ಮಾಡುವ ಕೆಲಸ ನಡೆಯುತ್ತಿದೆ. ಶಾಶ್ವತ ಅಭಿವೃದ್ಧಿಯ ಬದಲು ಮೋಸದ ರಾಜಕಾರಣವೇ ರಾಜ್ಯದಲ್ಲಿ ನಡೆಯುತ್ತಿದೆ” ಎಂದು ಆರೋಪಿಸಿದ ಅವರು, ಸಾರಿಗೆ ಇಲಾಖೆಯ ಸ್ಥಿತಿಯೂ ದಯನೀಯವಾಗಿದೆ ಎಂದರು. ಕೆಎಸ್‌ಆರ್‌ಟಿಸಿ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹಳೆಯ ಬಸ್‌ಗಳೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ದುರಸ್ತಿ ಕಾರ್ಯಕ್ಕೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ನೌಕರರು ಹಾಗೂ ಸರ್ಕಾರಿ ನೌಕರರ ವೇತನ ಸಮಸ್ಯೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. “ಎಲ್ಲಾ ಇಲಾಖೆಗಳಲ್ಲೂ ಆಡಳಿತ ಸಂಪೂರ್ಣ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಮೂರು ವರ್ಷದ ಸಾಧನಾ ಸಮಾವೇಶ ಯಾವ ಸಾಧನೆಗಾಗಿ?” ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ರಾಜಕಾರಣ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಜಾಬ್ ವಿಚಾರವನ್ನು ಉಲ್ಲೇಖಿಸಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. “ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಇರುವಾಗಲೇ ನಿಷೇಧ ಹಿಂಪಡೆಯಲು ಮುಂದಾಗಿರುವುದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ” ಎಂದು ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಕುರಿತು ಮಾತನಾಡಿದ ಅವರು, “ಹಗರಣದ ಹಣಕ್ಕಾಗಿ ಸಮಾವೇಶ ಮಾಡುತ್ತಿದ್ದೀರಾ? ರೈತರ ಸಾವಿಗೆ ಸಮಾವೇಶ ಮಾಡುತ್ತಿದ್ದೀರಾ?” ಎಂದು ಸರ್ಕಾರವನ್ನು ಪ್ರಶ್ನಿಸಿದರು. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿಗಳನ್ನು “ಬ್ರದರ್” ಎಂದು ಕರೆಯಲಾಗಿದೆ ಎಂದು ಟೀಕಿಸಿದ ಅವರು, ಸರ್ಕಾರ ಯಾವ ಸಾಧನೆಗಾಗಿ ಸಮಾವೇಶ ನಡೆಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ರಾಜ್ಯದ ಜನರು ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, “ಸೂರ್ಯ ಮತ್ತು ಚಂದ್ರ ಇರುವಷ್ಟು ಸತ್ಯವಾಗಿ ೨೦೨೮ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ರಾಜ್ಯದಲ್ಲಿ ಮೂರು ವರ್ಷಗಳನ್ನು ಪೂರೈಸಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಜಾಹೀರಾತುಗಳ ಹಬ್ಬ ನಡೆಸುತ್ತಿದೆಯೇ ಹೊರತು, ಜನಸಾಮಾನ್ಯರ ಬದುಕಿನಲ್ಲಿ ಯಾವುದೇ ಬದಲಾವಣೆ ತರಲು ವಿಫಲವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು.

ರಾಜ್ಯದಲ್ಲಿ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆಗಳು, ಕಾನೂನು ಸುವ್ಯವಸ್ಥೆಯ ಹದಗೆಟ್ಟ ಪರಿಸ್ಥಿತಿ, ಭ್ರಷ್ಟಾಚಾರ, ವಿದ್ಯುತ್ ಹಾಗೂ ಕುಡಿಯುವ ನೀರಿನ ತೊಂದರೆ ಸೇರಿದಂತೆ ಜನಜೀವನಕ್ಕೆ ಸಂಬAಧಿಸಿದ ಅನೇಕ ಸಮಸ್ಯೆಗಳ ಕುರಿತು ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಯ ನೈಜ ಚಿತ್ರಣವೇ ಕಾಣಿಸುತ್ತಿಲ್ಲ. ರಸ್ತೆ, ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಯಾವುದೇ ಸಮರ್ಪಕ ಪ್ರಗತಿ ಕಂಡುಬAದಿಲ್ಲ ಎಂದು ಟೀಕಿಸಿದರು.

“ಮೂರು ವರ್ಷದ ಸರ್ಕಾರಕ್ಕೆ ಮುನ್ನೂರು ವೈಫಲ್ಯಗಳ ಮಾಲಾರ್ಪಣೆ” ಎಂಬ ೩೩ ಪುಟಗಳ ಸರಮಾಲೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ದಾಖಲೆ ಸಮೇತ ಜನರ ಮುಂದಿಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ತಪ್ಪು ದಾರಿಗೆಳೆಯುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ” ಎಂದು ಆರೋಪಿಸಿದರು.

ಜನರ ಬದುಕು ಸಂಕಷ್ಟದಲ್ಲಿದ್ದರೂ ಸರ್ಕಾರ ಆತ್ಮಪರಿಶೀಲನೆ ಮಾಡದೇ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ದುರಂತಕರ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ನಾಗರತ್ನಾ ಕುಪ್ಪಿ, ಡಾ. ಶರಣಭೂಪಾಲರಡ್ಡಿ ನಾಯ್ಕಲ್, ಮಹೇಶರಡ್ಡಿಗೌಡ ಮುದ್ನಾಳ, ಮೇಲಪ್ಪ ಗುಳಗಿ, ಪರಶುರಾಮ ಕುರಕುಂದಿ, ತಿರುಪತಿರಡ್ಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.