
ಬೆಂಗಳೂರು, ಜೂ. ೧- ಶಾಲೆಗಳು ಇಂದಿನಿಂದ ಪುನರಾರಂಭವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶುಭ ಕೋರಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿಚಾರಗಳನ್ನು ಮುಂದೆ ಮಾತನಾಡುತ್ತೇನೆ. ಈಗ ಬೇಡ ಎಂದು ಹೇಳಿ, ರಾಜಕಾರಣ ಕುರಿತಾದಂತ ಪ್ರಶ್ನೆಗಳಿಗೆ ಉತ್ತರಿಸದೆ ಶಾಲಾ ಮಕ್ಕಳಿಗೆ ಶುಭ ಕೋರಿದರು.
ಶಿಕ್ಷಣ ಕ್ಷೇತ್ರ ನನಗೆ ಬಹಳ ಪ್ರಿಯವಾದದ್ದು ಇಂದು ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ನಮ್ಮ ವಿದ್ಯಾರ್ಥಿಗಳು ಇಡೀ ವಿಶ್ವವೇ ತಿರುಗಿ ನೋಡುವಂತಹ ಸಾಧನೆ ಮಾಡಲಿ. ಎಲ್ಲ ಮಕ್ಕಳಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಖಾಸಗಿ ಶಾಲೆಗಳಿಂದ ನಮ್ಮ ಸರ್ಕಾರಿ ಶಾಲೆಗಳಲ್ಲೇ ಉತ್ತಮವಾಗಿ ಪಾಠ ಮಾಡುತ್ತಾರೆ ಎಂದರು.
ರಾಜ್ಯದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆಗಳನ್ನು ಮಾಡಿದ್ದಾರೆ. ಪ್ರಪಂಚದ ಹಲವು ವಿವಿಗಳಿಗೆ ಹೋಗಿ ಕಲಿಯುತ್ತಿದ್ದಾರೆ. ಈ ಪಂರಪರೆಯನ್ನು ಇಂದಿನ ವಿದ್ಯಾರ್ಥಿಗಳು ಮುಂದುವರೆಸಲಿ. ಇಡೀ ಭಾರತ ಕರ್ನಾಟಕವನ್ನು ನೋಡುತ್ತಿದೆ ಎಂದು ಅವರು ಹೇಳಿದರು.
ಐಪಿಎಲ್ ಫೈನಲ್ ಅನ್ಯಾಯ
ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಆಡಿ ಆರ್‌ಸಿಬಿ ಚಾಂಪಿಯನ್ನಾಗಿರುವುದಕ್ಕೆ ಅಭಿನಂದನೆ ಹೇಳಿದ ಡಿ.ಕೆ. ಶಿವಕುಮಾರ್ ಅವರು, ಆರ್‌ಸಿಬಿ ಕರ್ನಾಟಕದ ಹೆಸರಿನಲ್ಲಿ ಐಪಿಎಲ್‌ನಲ್ಲಿ ಆಡಿ ಗೆದ್ದಿದೆ. ಇಡೀ ಕರ್ನಾಟಕ ಹೆಮ್ಮೆಪಡುವ ರೀತಿಯಲ್ಲಿ ಮಾಡಿದೆ. ರಾಜ್ಯದ ಪರವಾಗಿ ಆರ್‌ಸಿಬಿ ತಂಡಕ್ಕೆ ಅಭಿನಂದನೆ ಎಂದರು.
ಬೆಂಗಳೂರಿನಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಬೇಕಿತ್ತು. ಫೈನಲ್ ಪಂದ್ಯಕ್ಕೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿತ್ತು. ಆದರೆ ಗುಜರಾತಿನವರು ಪ್ರಭಾವ ಬೀರಿ ನಮ್ಮಿಂದ ಕಿತ್ತುಕೊಂಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇನೆ. ನಮ್ಮಲ್ಲಿರುವ ಯುವಕರಿಗೆ ಅನ್ಯಾಯವಾಗಿದೆ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರ ಹಾಕಿದರು.




























