
ಬೀದರ:ಜೂ.೧೭: ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ನಡೆಸದೇ ಇದ್ದಿದ್ದರೆ ಭಾರತದ ಮಹಿಳೆಯರು ಇಂದಿಗೂ ಸ್ವತಂತ್ರ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಗೀತಾ ಪಂಡಿತ ಚಿದ್ರಿ ಹೇಳಿದರು.
ನಗರದ ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಬುದ್ಧ, ಭೀಮ ಸಾಂಸ್ಕೃತಿಕ ಸಂಘ ಬೀದರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜೂನ್ ೧೫ರಂದು ಆಯೋಜಿಸಿದ್ದ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಸಾಂಸ್ಕೃತಿಕ ಉತ್ಸವ ಮತ್ತು “ಜ್ಞಾನಜ್ಯೋತಿ ಸಾವಿತ್ರಿಬಾಯಿ ಫುಲೆ” ಕುರಿತ ವಿಚಾರ ಸಂಕಿರಣವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ಕಾರಣದಿಂದ ಶಿಕ್ಷಣ ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು. ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶವೇ ಇರಲಿಲ್ಲ. ಬಾಲ್ಯ ವಿವಾಹದ ಮೂಲಕ ಮಹಿಳೆಯರ ಬದುಕು ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಫುಲೆ ಅವರು ಶಿಕ್ಷಣ ಪಡೆದು ಮಹಿಳೆಯರನ್ನು ನಾಲ್ಕು ಗೋಡೆಗಳ ಮಧ್ಯದಿಂದ ಹೊರತಂದು ಸಮಾಜದ ಮುಖ್ಯವಾಹಿನಿಗೆ ತಂದರು ಎಂದು ಹೇಳಿದರು.
ಮಹಿಳಾ ಶಿಕ್ಷಣಕ್ಕಾಗಿ ಶಾಲೆ ಆರಂಭಿಸಿದಾಗ ಸಂಪ್ರದಾಯವಾದಿಗಳ ತೀವ್ರ ವಿರೋಧ ಎದುರಿಸಿದ ಸಾವಿತ್ರಿಬಾಯಿ ಫುಲೆ ಅವರ ಮೇಲೆ ಸಗಣಿ ಎಸೆಯುವುದು, ನಿಂದಿಸುವುದು ಸೇರಿದಂತೆ ಹಲವು ರೀತಿಯ ಅವಮಾನಗಳು ನಡೆದರೂ ಅವರು ಹಿಂಜರಿಯದೆ ಶಿಕ್ಷಣದ ಜ್ಯೋತಿಯನ್ನು ಬೆಳಗಿಸಿದರು ಎಂದು ಗೀತಾ ಚಿದ್ರಿ ವಿವರಿಸಿದರು.
ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಅವರ ಶಿಕ್ಷಣ ಕ್ರಾಂತಿಯಿAದಲೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ ಪಡೆಯಲು ಸಾಧ್ಯವಾಯಿತು. ನಂತರ ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚಿಸಿ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಕಲ್ಪಿಸಿದರು. ಆದ್ದರಿಂದ ದೇಶದ ಮಹಿಳೆಯರು ಸಾವಿತ್ರಿಬಾಯಿ ಫುಲೆ ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸದಾ ಋಣಿಯಾಗಿರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಬಸವಭೂಷಣ ಪ್ರಶಸ್ತಿ ಪುರಸ್ಕೃತ, ಬಸವ ಯೋಗಾಶ್ರಮ ಕೌಠಾ (ಬಿ)ಯ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ಮಹಿಳಾ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಫುಲೆ ಅನುಭವಿಸಿದ ಕಷ್ಟಗಳನ್ನು ಸ್ಮರಿಸಿದರು. ಇದೇ ವೇಳೆ ಸಂವಿಧಾನದ ಆಶಯಗಳು ಹಂತಹAತವಾಗಿ ದುರ್ಬಲಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಶಿಕ್ಷಣದ ಖಾಸಗೀಕರಣದಿಂದ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದುಸ್ತರವಾಗುತ್ತಿದೆ. ಶಿಕ್ಷಣ ಮತ್ತು ಮತದಾನದ ಹಕ್ಕುಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ವಿಚಾರ ಸಂಕಿರಣದಲ್ಲಿ ಮಾತನಾಡಿ ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಸಂವಿಧಾನದ ಮಹತ್ವ ಕುರಿತು ಅಭಿಪ್ರಾಯ ಹಂಚಿಕೊAಡರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ತುಕಾರಾಮ ಹದನೂರೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತಾಲೂಕು ವಿಸ್ತೀರ್ಣಾಧಿಕಾರಿ ಉಮೇಶ ಕರಡ್ಯಾಳ, ನಿವೃತ್ತ ಆರ್‌ಟಿಒ ಶಂಕರ ಭಯ್ಯಾ ಚಿಟಗುಪ್ಪಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಕ್ಲಿಂಟನ್, ರಾಹುಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಧನರಾಜ ಎಸ್. ಬೆಳಕುಣಿಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಅಮ್ರಪಾಲಿ ಬುದ್ಧವಿಹಾರ, ಕಲಬುರ್ಗಿಯ ಪೂಜ್ಯ ಭಂತೆ ಧಮ್ಮಜ್ಯೋತಿ ವಹಿಸಿದ್ದರು. ಶೇಷರಾವ ಬೆಳಕುಣಿಕರ್ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ. ಕುಚಬಾಳ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಬಸವಭೂಷಣ ಪ್ರಶಸ್ತಿ ಪುರಸ್ಕೃತ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು, ವಿಜಯಕುಮಾರ ಸೋನಾರೆ ಹಾಗೂ ಪ್ರೇಮಸಾಗರ ದಾಂಡೇಕರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ೧೫ಕ್ಕೂ ಹೆಚ್ಚು ಕಲಾ ತಂಡಗಳು ಭಾಗವಹಿಸಿ, ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಸಾರುವ ಭಜನೆಗಳು, ತತ್ವಪದಗಳು ಮತ್ತು ಕ್ರಾಂತಿ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆಗೊಂಡವು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನರು ಪಾಲ್ಗೊಂಡಿದ್ದರು.





























