
ಹುಳಿಯಾರು, ಸೆ. ೨೬- ನಾಯಿ ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದಾಗ ಅಥವಾ ಪರಚಿದಾಗ ನಿರ್ಲಕ್ಷ್ಯ ವಹಿಸದೆ, ಗಾಯವಾದ ಭಾಗವನ್ನು ಕನಿಷ್ಠ ೧೫ ನಿಮಿಷಗಳ ಕಾಲ ಹರಿಯುವ ನೀರು ಹಾಗೂ ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ನಂತರ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರ ಸಲಹೆಯಂತೆ ರೇಬಿಸ್ ನಿರೋಧಕ ಲಸಿಕೆಯ ನಾಲ್ಕು ಡೋಸ್ಗಳನ್ನು ಪಡೆಯಬೇಕು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಕೃಷ್ಣ ತಿಳಿಸಿದರು.
ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಇಂದಿರಾನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ವಿಶ್ವ ರೇಬಿಸ್ ರೋಗ ವಾರದ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೇಬಿಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು, ಪ್ರಾಣಿಗಳ ಕಚ್ಚುವಿಕೆ ಅಥವಾ ಪರಚುವಿಕೆಯ ಮೂಲಕ ಮನುಷ್ಯರಿಗೆ ಹರಡಬಹುದು. ಪ್ರಾಣಿ ಕಚ್ಚಿದ ಸಂದರ್ಭದಲ್ಲಿ ಗಾಯಕ್ಕೆ ಅರಿಶಿನ, ಎಣ್ಣೆ ಅಥವಾ ಇತರೆ ಮನೆ ಮದ್ದುಗಳನ್ನು ಹಚ್ಚದೆ, ತಕ್ಷಣ ಸಾಬೂನು ಮತ್ತು ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸಾಕು ನಾಯಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸುವುದು ಹಾಗೂ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಪ್ರಾಣಿಗಳೊಂದಿಗೆ ಸುರಕ್ಷಿತವಾಗಿ ವರ್ತಿಸುವ ಕುರಿತು ಅರಿವು ಮೂಡಿಸುವುದು ಅಗತ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರೇಣುಕರಾಜ್ ಬಿ.ಸಿ., ಸಮುದಾಯ ಆರೋಗ್ಯ ಅಧಿಕಾರಿ ವಸಂತ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು.


























