
ಬೆಂಗಳೂರು, ಮೇ ೨೭- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬದಲಿಸಿ ಹೊಸ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಹೈಕಮಾಂಡ್ ಅಣಿಯಾಗಿರುವಾಗಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಮನೆಯಲ್ಲಿ ಹೋಮ ಹವನಗಳನ್ನು ನಡೆಸಿರುವುದು ವಿಶೇಷವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಮಾಡುವ ತೀರ್ಮಾನವನ್ನು ಹೈಕಮಾಂಡ್ ಕೈಗೊಂಡರೆ ಮುಖ್ಯಮಂತ್ರಿ ರೇಸ್‌ನಲ್ಲಿ ನಾನು ಇರುತ್ತೇನೆ ಎಂಬ ಸುಳಿವನ್ನು ಹಲವು ಬಾರಿ ನೀಡಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಈಗ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆಗೆ ನಿರ್ಧಾರ ಮಾಡುತ್ತಿದ್ದಂತೆಯೇ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ನಡೆಸಿರುವುದು ಕುತೂಹಲ ಮೂಡಿಸಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದು ಬೆಳಿಗ್ಗೆಯೇ ರೇಷ್ಮೆ ವಸ್ತ್ರಗಳನ್ನು ಧರಿಸಿ ಪೂಜೆಯಲ್ಲಿ ಪಾಲ್ಗೊಂಡಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಪರಮೇಶ್ವರ್ ಹೇಳಿಕೆ
ತಮ್ಮ ನಿವಾಸದಲ್ಲಿ ಪೂಜೆ, ಹೋಮ ಹವನದ ನಡುವೆಯೇ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಹೈಕಮಾಂಡ್ ನಾಯಕರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಚರ್ಚೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಸಾಕಷ್ಟು ವದಂತಿ ಹರಿದಾಡುತ್ತಿದೆ. ಇನ್ನೂ ಯಾವುದೇ ಸ್ಪಷ್ಟತೆ ಇಲ್ಲ. ಇಂದು ಸುರ್ಜೇವಾಲ ರವರು ಬೆಂಗಳೂರಿಗೆ ಬರುತ್ತಿದ್ದಾರೆ. ಎಲ್ಲಾ ಗೊಂದಲಗಳಿಗೆ ನಾಳೆ ಅವರೇ ತೆರೆ ಎಳೆಯುತ್ತಾರೆ ಎಂದು ಹೇಳಿದರು.
ಸದ್ಯಕ್ಕೆ ನಮಗೆ ಯಾವುದೇ ಮಾಹಿತಿ ಇಲ್ಲ. ಸಾಕಷ್ಟು ವದಂತಿ ಹರಿದಾಡುತ್ತಿದೆ. ನಿನ್ನೆ ಸುರ್ಜೇವಾಲ ರವರು ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ಚರ್ಚಿಸಿದೆ ಎದು ಹೇಳಿದ್ದಾರೆ. ನಮಗೂ ಅಷ್ಟೇ ಗೊತ್ತಿರುವುದು, ಸದ್ಯಕ್ಕೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.
ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜೇವಾಲ ಮತ್ತು ವೇಣುಗೋಪಾಲ್ ಬೆಂಗಳೂರಿಗೆ ಬರುತ್ತಾರೆ. ಅವರು ಏನು ಘೋಷಣೆ ಮಾಡುತ್ತಾರೋ ನೋಡಬೇಕು. ಸಿದ್ದರಾಮಯ್ಯ ರಾಜೀನಾಮೆಗೆ ಒಪ್ಪಿದ್ದಾರೆ ಎಂಬುದು ಅಪ್ರಸ್ತುತ. ಏನು ತೀರ್ಮಾನ ಮಾಡಬೇಕು ಎಂಬುದನ್ನು ಹೈಮಾಕಂಡ್ ನಿರ್ಧರಿಸುತ್ತದೆ. ನಾನು ಸಿಎಂ ಹುದ್ದೆ ಆಕಾಂಕ್ಷಿ ಎನ್ನುವುದೂ ಅಪ್ರಸ್ತುತ ಎಂದು ಅವರು ಹೇಳಿದರು.
ದೆಹಲಿಯಲ್ಲಿ ನಿನ್ನೆ ಕೆ.ಜೆ. ಜಾರ್ಜ್ ಮನೆಯಲ್ಲಿ ನಾವೆಲ್ಲಾ ಊಟ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನಮ್ಮ ಗಮನಕ್ಕೆ ಏನೂ ತರಲಿಲ್ಲ. ನಾವು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿಲ್ಲ ಎಂದು ಹೇಳಿದರು.
ಸಿಎಂ ರಾಜೀನಾಮೆ ಊಹಾಪೋಹ : ಎಂಬಿಪಾ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಹೈಕಮಾಂಡ್ ಸೂಚನೆ ನೀಡಿರುವಾಗಲೇ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸಿಎಂ ರಾಜೀನಾಮೆ ಎನ್ನುವುದೆಲ್ಲಾ ಊಹಾಪೋಹ. ಸಿಎಂ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂಬ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸಮ್ಮುಖದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ನಂತರ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ಬೇರೆಯದೆಲ್ಲಾ ಊಹಾಪೋಹ ಎಂದು ಹೇಳಿದ್ದಾರೆ. ಸಿಎಂ ರಾಜೀನಾಮೆ ಪ್ರಶ್ನೆ ಉದ್ಭವವಾಗಲ್ಲ ಎಂದರು.
ನಾವೆಲ್ಲಾ ನಿನ್ನೆ ದೆಹಲಿಯಲ್ಲಿ ಜಾರ್ಜ್ ಮನೆಯಲ್ಲಿದ್ದೆವು. ಬೆಳಿಗ್ಗೆ, ರಾತ್ರಿ ಜಾರ್ಜ್ ಮನೆಯಲ್ಲಿ ಒಳ್ಳೆಯ ಊಟವನ್ನು ಮಾಡಿದ್ದೇವೆ. ನಾವೆಲ್ಲಾ ಸಿದ್ದರಾಮಯ್ಯನವರ ಜತೆಯಲ್ಲಿದ್ದೆವು. ಒಟ್ಟಿಗೆ ದೆಹಲಿಗೆ ಹೋಗಿ ಬಂದಿದ್ದೇವೆ. ಯಾವುದೇ ಬೇರೆ ವಿಚಾರಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಎಂ.ಬಿ. ಪಾಟೀಲ್ ಹೇಳುವ ಮೂಲಕ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.


























