
ಬೆಂಗಳೂರು, ಮೇ ೨೫- ರಾಜ್ಯ ಕಾಂಗ್ರೆಸ್‌ನ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಕಾಂಗ್ರೆಸ್ ಹೈಕಮಾಂಡ್ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಚರ್ಚೆ ನಡೆಸಿ ಎಲ್ಲದಕ್ಕೂ ಪರಿಹಾರ ರೂಪಿಸಲಿದೆ.
ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆಯ ಕೂಗಿನ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ನಾಳೆ ದೆಹಲಿಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸಿದ್ದು, ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ದೆಹಲಿಗೆ ತೆರಳುವರು.
ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಹಲವು ತಿಂಗಳಿನಿಂದ ಗೊಂದಲದ ಗೂಡಾಗಿದ್ದು, ನಾಯಕತ್ವ ಬದಲಾವಣೆ ಹಾಗೂ ಸಂಪುಟ ಪುನಾರಚನೆಯ ಚರ್ಚೆಗಳಿಂದ ಬಾಧಿತವಾಗಿದೆ.
ರಾಜ್ಯ ಕಾಂಗ್ರೆಸ್‌ನ ಈ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ಮನಸ್ಸು ಮಾಡಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಕಾಂಗ್ರೆಸ್‌ನ ವರಿಷ್ಠ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಯವರು ಚರ್ಚೆ ನಡೆಸುವರು.
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಚರ್ಚೆಯ ನಂತರ ರಾಜ್ಯ ಕಾಂಗ್ರೆಸ್‌ನ ಗೊಂದಲಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳಿವೆ.
ನಾಳಿನ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಹೈಕಮಾಂಡ್ ಬುಲಾವ್ ನೀಡದಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಸ್‌ಐಆರ್ ಸಂಬಂಧ ಕಾಂಗ್ರೆಸ್ ನಡೆಸಿದ ಸಭೆಯ ನಡುವೆಯೇ ದೆಹಲಿಗೆ ಬರುವಂತೆ ಹೈಕಮಾಂಡ್ ನಾಯಕರಿಂದ ಕರೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ದೆಹಲಿಗೆ ಬರುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು.
ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಒಪ್ಪಂದ ಜಾರಿಯಾಗಬೇಕು. ನಾಯಕತ್ವ ಬದಲಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೂ ಒಂದು ಅವಕಾಶ ಸಿಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ನಿಂತಿರುವ ಶಾಸಕರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣದ ತಂತ್ರಕ್ಕೆ ಪ್ರತಿತಂತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಗುರುತಿಸಿಕೊಂಡಿರುವ ಶಾಸಕರುಗಳು ದೆಹಲಿಗೆ ತೆರಳಿ ಸಂಪುಟ ಪುನಾರಚನೆಗೆ ಒತ್ತಡ ಹೇರಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಹೈಕಮಾಂಡ್ ನಾಳೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಚರ್ಚೆ ನಡೆಸಲಿದ್ದು, ಸಂಪುಟ ಪುನಾರಚನೆಯಾಗುತ್ತದೆಯೋ ಇಲ್ಲವೇ ನಾಯಕತ್ವ ಬದಲಾವಣೆಯಾಗುತ್ತದೆಯೋ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಣದ ನಾಯಕರ ಪ್ರಕಾರ ನಾಯಕತ್ವ ಬದಲಾವಣೆ ಇಲ್ಲ. ಮುಖ್ಯಮಂತ್ರಿಗಳು ವರಿಷ್ಠರ ಜತೆ ಚರ್ಚಿಸಿ ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆದು ಬರುತ್ತಾರೆ ಎಂದು ಸಿದ್ದರಾಮಯ್ಯ ಬಣದ ಶಾಸಕರು ಹೇಳುತ್ತಿದ್ದು, ಹೈಕಮಾಂಡ್ ರಾಜ್ಯ ಕಾಂಗ್ರೆಸ್‌ನ ಗೊಂದಲಗಳಿಗೆ ಯಾವ ರೀತಿ ಪರಿಹಾರ ಸೂತ್ರ ರೂಪಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಎಲ್ಲದಕ್ಕೂ ನಾಳೆ ನಡೆಯುವ ಸಭೆಯಲ್ಲಿ ಉತ್ತರ ಸಿಗಲಿದೆ.
ರಾಜ್ಯಸಭೆ: ವಿಧಾನಸಭಾ ಚುನಾವಣೆ ಚರ್ಚೆ
ನಾಳಿನ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠರು ಜೂನ್ ೧೮ ರಂದು ನಡೆಯಲಿರುವ ರಾಜ್ಯಸಭೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗಳ ಸಂಬಂಧವೂ ಚರ್ಚೆ ನಡೆಸಲಿದ್ದು, ರಾಜ್ಯಸಭಾ ಚುನಾವಣೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದಿಂದ ಮರು ಆಯ್ಕೆ ನಡೆಸುವ ಬಗ್ಗೆಯೂ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಹೈಕಮಾಂಡ್ ನನ್ನನ್ನು ಕರೆದಿಲ್ಲ: ಡಿಕೆಶಿ
ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ದೆಹಲಿಗೆ ಕರೆದಿರುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನನಂತೂ ಹೈಕಮಾಂಡ್ ದೆಹಲಿಗೆ ಕರೆದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೆಹಲಿಗೆ ಬರುವಂತೆ ಹೈಕಮಾಂಡ್ ನಾಯಕರು ಸಿಎಂ ಜತೆ ನಿಮ್ಮನ್ನು ಕರೆದಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ನನ್ನನಂತೂ ಕರೆದಿಲ್ಲ. ಮುಖ್ಯಮಂತ್ರಿಗಳನ್ನು ಕರೆದಿರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ ಎಂದು ಚುಟುಕಾಗಿ ಉತ್ತರಿಸಿದರು.
ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿಗಳನ್ನು ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರೆದಿದ್ದಾರಾ ಅಥವಾ ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಕರೆದಿದ್ದಾರಾ ಎಂಬ ಪ್ರಶ್ನಗೆ, ಆ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿ, ಈ ಬಗ್ಗೆ ಹೆಚ್ಚೇನು ಉತ್ತರಿಸಲು ಅವರು ಬಯಸಲಿಲ್ಲ.


























