
ಬೆಂಗಳೂರು, ಜು. ೧೭- ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ನಿನ್ನೆ ಮಹತ್ವದ ಸಭೆಗಳಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದು, ಮುಂದಿನ ವಿಧಾನಸಭಾ ಅಧಿವೇಶನದೊಳಗೆ ಸಂಪುಟ ವಿಸ್ತರಣೆಯಾಗುವುದು ಪಕ್ಕಾ ಆಗಿದೆ.
ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಲು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರುಗಳು ದೆಹಲಿಗೆ ತೆರಳಿದ್ದರು. ನಿನ್ನೆ ಇಡೀ ದಿನ ರಾಜ್ಯ ನಾಯಕರುಗಳು ಕಾಂಗ್ರೆಸ್ ವರಿಷ್ಠರೊಂದಿಗೆ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಪುತ್ರನ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರ ನೇತೃತ್ವದಲ್ಲಿ ನಡೆದ ಸಭೆಯನ್ನು ಮೊಟಕುಗೊಳಿಸಲಾಗಿತ್ತು. ಖರ್ಗೆಯವರು ನಿನ್ನೆ ಬೆಂಗಳೂರಿಗೆ ವಾಪಸ್ಸಾದರು. ಆನಂತರ ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಿದ್ದರು.
ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಪುತ್ರನ ಆರೋಗ್ಯ ಸುಧಾರಣೆ ನಂತರ ಖರ್ಗೆ ಅವರು ದೆಹಲಿಗೆ ಬಂದ ಬಳಿಕ ಅವಶ್ಯಬಿದ್ದರೆ ನಿಮ್ಮನ್ನು ಕರೆಯುತ್ತೇನೆ. ಆಗ ದೆಹಲಿಗೆ ಬನ್ನಿ ಎಂದು ರಾಹುಲ್‌ಗಾಂಧಿ ರಾಜ್ಯ ನಾಯಕರುಗಳಿಗೆ ಸೂಚನೆ ನೀಡಿದ್ದರು. ಇದಾದ ಬಳಿಕ ನಿನ್ನೆ ತಡ ರಾತ್ರಿ ಕೆ.ಸಿ. ವೇಣುಗೋಪಾಲ್, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್ ರವರೊಂದಿಗೆ ರಾಹುಲ್‌ಗಾಂಧಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು.
ಈ ಮಾತುಕತೆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕಡೆಯಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಪಟ್ಟಿಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಎಲ್ಲರ ಜತೆ ಚರ್ಚಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ನೀಡಿರುವ ಪಟ್ಟಿಯನ್ನು ಗಣನೆಗೆ ತೆಗೆದುಕೊಂಡು ತಮ್ಮದೇ ಆದ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಜತೆ ಒಂದು ಸುತ್ತಿನ ಚರ್ಚೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.
ಅಗತ್ಯಬಿದ್ದರೆ ಮಾತ್ರ ಹೈಕಮಾಂಡ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಂದಿನ ವಾರ ಮತ್ತೆ ದೆಹಲಿಗೆ ಕರೆಯಬಹುದು. ಇಲ್ಲದಿದ್ದರೆ ಕಾಂಗ್ರೆಸ್ ಹೈಕಮಾಂಡೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮುಂದಿನ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಹುಲ್‌ಗಾಂಧಿ ರವರು ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸಚಿವರ ಪಟ್ಟಿಗೆ ಅಂತಿಮ ರೂಪ ನೀಡಲಿದ್ದಾರೆ. ಅಗತ್ಯಬಿದ್ದರೆ ಮಾತ್ರ ರಾಜ್ಯ ನಾಯಕರರನ್ನು ಕರೆದು ಚರ್ಚಿಸಲಿದ್ದಾರೆ.
ಬರುವ ಆಗಸ್ಟ್ ೬ ರಿಂದ ವಿಧಾಮಮಂಡಲದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಪಕ್ಕಾ.
ಖಾಲಿ ಇರುವ ಸಂಪುಟದಲ್ಲಿ ೨೦ ಸ್ಥಾನಗಳಿಗೆ ೪೦ ಕ್ಕೂ ಹೆಚ್ಚು ಶಾಸಕರು ಸಚಿವಕಾಂಕ್ಷಿಗಳಾಗಿದ್ದು, ಹೈಕಮಾಂಡ್ ಹಿರಿತನ, ಪ್ರಾದೇಶಿಕವಾರು, ಜಾತಿವಾರು ಎಲ್ಲವನ್ನು ನೋಡಿ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ದೆಹಲಿಗೆ ತೆರಳಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಹರಿಪ್ರಾಸದ್ ಇಂದು ಬೆಂಗಳೂರಿ೯ಗೆ ವಾಪಸ್ಸಾಗಿದ್ದಾರೆ. ಮತ್ತೆ ಹೈಕಮಾಂಡ್ ಕರೆದರೆ ದೆಹಲಿಗೆ ಹೋಗುತ್ತೇವೆ ಎಂದು ಇವರುಗಳು ಹೇಳಿದ್ದು, ಹೈಕಮಾಂಡ್ ಸದ್ಯದಲ್ಲೇ ಎಲ್ಲವನ್ನು ನೋಡಿ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿ ಮಾಡಲಿದೆ.
ಸಿದ್ದರಾಮಯ್ಯ ಉಪಹಾರ ಸಭೆ
ದೆಹಲಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ದೆಹಲಿಯ ಕರ್ನಾಟಕ ಭವನದಲ್ಲಿ ಬೆಳಗ್ಗೆ ತಮ್ಮ ಆಪ್ತ ಶಾಸಕರ ಜತೆ ಉಪಹಾರ ಸಭೆ ನಡೆಸಿ ಲೋಕಾಭಿರಾಮವಾಗಿ ಮಾತನಾಡಿದರು.
ನಿನ್ನೆ ಇಡೀ ದಿನ ಸರಣಿ ಸಭೆಗಳಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆಯೇ ಕರ್ನಾಟಕ ಭವದಲ್ಲಿ ತಮ್ಮ ಆಪ್ತ ಶಾಸಕರ ಜತೆ ಉಪಹಾರ ಸೇವಿಸಿ, ಸಂಪುಟ ವಿಸ್ತರಣೆ ಬಗ್ಗೆ, ವರಿಷ್ಠರ ಜತೆಗಿನ ಚರ್ಚೆ ಎಲ್ಲವನ್ನು ಆಪ್ತ ಶಾಸಕರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಹಾರ ಸಭೆಯಲ್ಲಿ ಶಾಸಕರುಗಳಾದ ಅಪ್ಪಾಜಿ ನಾಡಗೌಡ, ಬಿ.ಆರ್. ಪಾಟೀಲ್, ಯಶವಂತರಾಯ ನಾಡಗೌಡ, ಹಂಪನಗಡ ಬಾದರ್ಲಿ, ಅಶೋಕ್ ಪಟ್ಟಣ, ವಿಜಯಾನಂದ ಕಾಶಂಪ್ಪನವರು, ರಹೀಂ ಖಾನ್, ಸುಬ್ಬಾರೆಡ್ಡಿ, ಕೋನರೆಡ್ಡಿ, ಎಂ. ಆರ್. ಸೀತಾರಾಮ್, ಮಾನೆ, ಎ,ಎಸ್. ಪೊನ್ನಣ್ಣ, ಎಂ.ಸಿ. ಸುಧಾಕರ್, ಎಂ.ಸಿ., ರಿಜ್ವಾನ್ ಹರ್ಷದ್, ಟಿ.ಬಿ. ಜಯಚಂದ್ರ, ಆರ್.ಬಿ. ತಿಮ್ಮಾಪುರ, ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು.

































